ಚಿಕ್ಕಮಗಳೂರು:(ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಆನೆ ದಾಳಿಗಳು, ಮಾನವ ಜೀವಹಾನಿ, ಬೆಳೆ ನಷ್ಟ ಮತ್ತು ತುರ್ತು ಕೇಂದ್ರ ಹಸ್ತಕ್ಷೇಪ ಕುರಿತು ರಾಷ್ಟ್ರೀಯ ವಕ್ತಾರರಾದ ಸುಧಾಕರ್ ಎಸ್ ಶೆಟ್ಟಿ ಕೇಂದ್ರ ಸಚಿವರಾದ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ವಿಶೇಷವಾಗಿ ಶೃಂಗೇರಿ ಕ್ಷೇತ್ರ ಮತ್ತು ಮೂಡಿಗೆರೆ ಕ್ಷೇತ್ರಗಳು ರೈತಾಪಿ ವರ್ಗಗಳಿಗೆ ಜೀವನಾಧಾರವಾಗಿರುವುದೇ ಕೃಷಿ ಪ್ರದೇಶ. ಆದರೆ ಇತ್ತೀಚಿನ ದಿನಗಳಲ್ಲಿ ಆನೆ ಹಾಗೂ ಕಾಡುಕೋಣ ದಾಳಿಗಳು ಹೆಚ್ಚಾಗಿದ್ದು, ಕಳೆದ ಎರಡು ವರ್ಷಗಳಲ್ಲಿ 11 ಮಂದಿ ಆನೆ ದಾಳಿಯಿಂದ 2 ಮಂದಿ ಕಾಡುಕೋಣ ದಾಳಿಯಿಂದ ಮೃತಪಟ್ಟಿದ್ದಾರೆ. ಇನ್ನು ಹಲವರು ಗಂಭೀರವಾಗಿ ಗಾಯಗೊಂಡಿರುವ ಪ್ರಕರಣಗಳು ದಾಖಲಾಗಿವೆ.

ಶೃಂಗೇರಿ ಕ್ಷೇತ್ರದ ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಹೋಬಳಿಯಲ್ಲಿ ಕಳೆದ ಮೂರು ತಿಂಗಳಲ್ಲಿ ಮೂರು ಸಾವುಗಳು ಆನೆ ದಾಳಿಯಿಂದ ಸಂಭವಿಸಿದೆ. ಇದೇ ತಿಂಗಳ 20ರಂದು ಬೆಳಿಗ್ಗೆ 9:00 ಗಂಟೆಗೆ ಬೋರಮ್ಮ ಎಂಬ ಮಹಿಳೆ ಆನೆ ದಾಳಿಯಿಂದ ಮೃತಪಟ್ಟ ದುರ್ಘಟನೆ ನಡೆದಿದೆ. ಈ ಘಟನೆಗಳ ಪರಿಣಾಮ ಬಳಿಕ ರೈತರು ತಮ್ಮ ಕಾಫಿ, ಅಡಿಕೆ ಹಾಗೂ ಭತ್ತದ ತೋಟಗಳಿಗೆ ಜೀವಭಯದಲ್ಲಿ ತೆರಳಬೇಕಾದ ಪರಿಸ್ಥಿತಿ ಉದ್ಭವವಾಗಿದೆ. ರೈತ ಕಾರ್ಮಿಕರು ಕೆಲಸಕ್ಕೆ ಬರಲು ಹಿಂಜರಿಯುತ್ತಿದ್ದು, ಇದರಿಂದ ಸಾವಿರಾರು ಎಕರೆ ಬೆಳೆ ಹಾನಿಯಾಗಿ ಗ್ರಾಮೀಣ ಆರ್ಥಿಕತೆ ಕುಂಠಿತಗೊಳ್ಳುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ; ಬೆಂಬಲ ಬೆಲೆ ಯೋಜನೆಯಡಿಯಲ್ಲಿ ವಿವಿಧ ಬೆಳೆಗಳ ಖರೀದಿ ಅವಧಿ ವಿಸ್ತರಣೆ
ಸರ್ಕಾರದ ನಿರ್ಲಕ್ಷ್ಯದಿಂದ ಸಮಸ್ಯೆ ಪುನಃ ಉಂಟಾಗುತ್ತಿದ್ದು, ಜೀವಹಾನಿಗೆ ಕರ್ನಾಟಕ ಸರ್ಕಾರ ನೀಡುತ್ತಿರುವ ರೂ.20 ಲಕ್ಷ ಪರಿಹಾರವನ್ನು ರೂ.50 ಲಕ್ಷಕ್ಕೆ ಏರಿಸಬೇಕೆಂದು ಹೋರಾಟ ನಡೆಸುತ್ತಿದ್ದಾಗ, ಲಾಠಿ ಚಾರ್ಜ್ ಹಾಗೂ ಮಲೆನಾಡು ರೈತ ಹಿತರಕ್ಷಣಾ ಸಮಿತಿಯ ಸುಮಾರು 9 ಜನರ ಮೇಲೆ ವಿವಿಧ ಕೇಸುಗಳನ್ನು ದಾಖಲಿಸಿದ್ದಾರೆ. ಬಿಜೆಪಿಯ ಮಾಜಿ ಶಾಸಕರಾದ ಜೀವರಾಜ್ ಹಾಗೂ ತಮ್ಮನ್ನು ಬಂಧಿಸಿ ನಂತರ ಬಿಡುಗಡೆ ಮಾಡಿರುವುದು ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತರ ಸಮಸ್ಯೆಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ ಈ ಗಂಭೀರ ಸಮಸ್ಯೆಯನ್ನು ತಕ್ಷಣ ಕೇಂದ್ರ ಮಟ್ಟದಲ್ಲಿ ವಿಚಾರ ಮಾಡುವಂತೆ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಸ್ಥಿತಿ ಅತ್ಯಂತ ಗಂಭೀರವಾಗಿದ್ದು, ಕೇಂದ್ರ ಸರ್ಕಾರ ತುರ್ತು ಸಭೆ ಕರೆಯಿಸಿ ರಾಜ್ಯ ಸರ್ಕಾರದೊಂದಿಗೆ ಸಮನ್ವಯ ಸಾಧಿಸಿ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಬೇಕಾಗಿ ಸುಧಾಕರ್ ಎಸ್ ಶೆಟ್ಟಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ವಿನಂತಿಸಿದ್ದಾರೆ.
ಕೇಂದ್ರ ಸರ್ಕಾರಕ್ಕೆ ಸುಧಾಕರ್ ಶೆಟ್ಟಿ ಅವರ ಬೇಡಿಕೆಗಳು:
- ರೈಲ್ವೆ ಬ್ಯಾರಿಕೆಡ್ ಮಾದರಿಯ ಶಾಶ್ವತ ಅಡೆತಡೆ ನಿರ್ಮಾಣಕ್ಕೆ ಕೇಂದ್ರ ಅನುದಾನ
- ಶಾಶ್ವತ ಆನೆ ಕಾರಿಡಾರ್ ಅಭಿವೃದ್ಧಿ ಯೋಜನೆಗೆ ವಿಶೇಷ ಪ್ಯಾಕೇಜ್
- ಮಾನವ ಜೀವಹಾನಿಗೆ ನೀಡುತ್ತಿರುವ ರೂ.20 ಲಕ್ಷ ಪರಿಹಾರವನ್ನು ಕನಿಷ್ಠ ರೂ.50 ಲಕ್ಷಕ್ಕೆ ಏರಿಸುವಂತೆ ಕ್ರಮ
- ಬೆಳೆ ನಷ್ಟಕ್ಕೆ ಪ್ರತ್ಯೇಕ ಕೇಂದ್ರ ಪರಿಹಾರ ನಿಧಿ
- ಅರಣ್ಯ–ಕೃಷಿ ಗಡಿಯಲ್ಲಿನ ತಂತ್ರಜ್ಞಾನ ಆಧಾರಿತ ಎಚ್ಚರಿಕೆ ವ್ಯವಸ್ಥೆ (Early Warning System) ಜಾರಿಗೆ ಕ್ರಮ
ರೈತರ ಜೀವ ಮತ್ತು ಬದುಕು ರಕ್ಷಿಸುವ ದೆಸೆಯಲ್ಲಿ ಕೇಂದ್ರ ಸರ್ಕಾರದ ತ್ವರಿತ ಮತ್ತು ದೃಢ ಕ್ರಮ ನಿರೀಕ್ಷಣೆ ಹಾಗೂ ಉಂಟಾಗುತ್ತಿರುವ ಸಮಸ್ಯೆ, ಸರ್ಕಾರದ ನಿರ್ಲಕ್ಷ್ಯದಿಂದ ಜೀವಹಾನಿಗಳ ಕುರಿತು ಕೇಂದ್ರ ಸರ್ಕಾರ ದೃಢ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದಾರೆ.












