‘ಮಳೆ’ನಾಡ ಅವಾಂತರ – ನ್ಯೂಸ್ ಮಲ್ನಾಡ್ ಟಾಪ್ 5 ಮಳೆ ನ್ಯೂಸ್

ಮಳೆಯ ನಡುವೆ ಮತ್ತೆ ಕಾಡಾನೆ ಕಾಟ: ಬೆಳೆ ನಾಶ

ಬಾಳೆಹೊನ್ನೂರು: ರಾಜ್ಯದಲ್ಲಿ ಮಳೆ ಅಬ್ಬರ ಜೋರಾಗಿದೆ. ಮಲೆನಾಡು ಭಾಗದಲ್ಲಿ ಮಳೆಯ ಆರ್ಭಟಕ್ಕೆ ಹೆದ್ದಾರಿ ಬದಿಯ ಹಲವು ಗುಡ್ಡಗಳು ಕುಸಿದು ಬೀಳುತ್ತಿದ್ದು, ನಾನಾ ಭಾಗಗಳಲ್ಲಿ ಸಂಚಾರ ಬಂದ್ ಆಗಿದೆ. ಹಲವು ಪ್ರದೇಶಗಳಿಗೆ ಸಂಪರ್ಕ ಕಡಿತವಾಗಿವೆ. ಮಲೆನಾಡಿನಲ್ಲಿ ಮಳೆಗೆ ತತ್ತರಿಸಿದ ಜನತೆಗೆ ಇದೀಗ ಕಾಡಾನೆ ಕಾಟ ಕೂಡ ಮತ್ತೆ ಶುರುವಾಗಿದೆ.

ಹೌದು, ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್ ಪುರ ತಾಲೂಕಿನ ಬಾಳೆಹೊನ್ನೂರಿನ ಆಮ್ತಿ ಕೃಷ್ಣೆಗೌಡ ಎಂಬುವವರ ತೋಟ ಸೇರಿದಂತೆ ಇನ್ನು ಕೆಲವು ತೋಟದಲ್ಲಿ ಕಾಡಾನೆ ಕಾಟ ಶುರುವಾಗಿದೆ. ಬಾಳೆ, ಅಡಿಕೆ ಬೆಳೆಗಳನ್ನು ಕಾಡಾನೆ ನಾಶ ಮಾಡಿದೆ. ಇದರಿಂದ ಬೆಳೆಗಾರರು ಆತಂಕಪಡುವಂತೆ ಆಗಿದ್ದು, ಅರಣ್ಯ ಇಲಾಖೆ ಸೂಕ್ತ ಪರಿಹಾರ ಒದಗಿಸುವಂತೆ ಆಗ್ರಹಿಸಿದ್ದಾರೆ.

ಕೊಚ್ಚಿಹೋದ ನಾಟಿ ಮಾಡಿದ್ದ ಗದ್ದೆ: ರಸ್ತೆ ಸಂಪೂರ್ಣ ಜಲಾವೃತ

ಕಳಸ: ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಯಡೂರು ಗ್ರಾಮದಲ್ಲಿ ನಾಟಿ ಮಾಡಿದ್ದ ಗದ್ದೆ ಸಂಪೂರ್ಣ ಜಲಾವೃತವಾಗಿರುವ ಘಟನೆ ನಡೆದಿದೆ. ನಾಟಿ ಮಾಡಿದ ಕೃಷಿ ಹಳ್ಳದಲ್ಲಿ ಕೊಚ್ಚಿ ಹೋಗಿದ್ದು, ಅಡಿಕೆ, ಬಾಳೆ ತೋಟ ಕೂಡ ಸಂಪೂರ್ಣ ಜಲಾವೃತವಾಗಿದೆ. ಅಲ್ಲದೆ ಹಳ್ಳದ ನೀರಿನಿಂದ ರಸ್ತೆಯೂ ಕೂಡ ಜಲಾವೃತವಾಗಿದ್ದು, ಇದರಿಂದ ಹಲವು ಗ್ರಾಮಗಳು ಕಂಗಾಲಾಗಿದ್ದಾರೆ.

ಮಳೆಯ ಅಬ್ವರಕ್ಕೆ ಮನೆ ಕುಸಿತ: ಪ್ರಾಣಾಪಾಯದಿಂದ ಪಾರು

ಮೂಡಿಗೆರೆ: ಮಲೆನಾಡಿನಲ್ಲಿ ಮಳೆಯ ಅಬ್ವರಕ್ಕೆ ಜೋರಾಗಿದ್ದು, ಹಲವು ಅವಾಂತರ ಸೃಷ್ಟಿ ಮಾಡಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದ ಬಿನ್ನಡಿ ಗ್ರಾಮದ ಭಾರತಿ ದಿನೇಶ್ ಎಂಬುವವರಿಗೆ ಸೇರಿದ ಮನೆ ಮಳೆಯಿಂದ ಕುಸಿತವಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇನ್ನು ಮೂಡಿಗೆರೆ ತಾಲೂಕಿನ ಬೆಟ್ಟಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಔಸನ ಗ್ರಾಮದ ತಾರಾನಗುಂಡಿ ವಾಸಿ ಸುಂದರ ಎಂಬುವವರ ಮನೆ ರಾತ್ರಿ ಸುರಿದ ಅತಿಯಾದ ಮಳೆಯಿಂದ ಗೋಡೆ ಮತ್ತು ಮೇಲ್ಚಾವಣಿ ಕುಸಿದಿದೆ. ವಿಚಾರ ತಿಳಿದ ಬಳಿಕ ಸ್ಥಳಕ್ಕೆ ಗ್ರಾಮ ಪಂಚಾಯಿತಿ ಅಧಿಕಾರಿ, ಚುನಾಯಿತ ಪ್ರತಿನಿಧಿಗಳು ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದು, ಸರ್ಕಾರದಿಂದ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.

ಶಿರಾಡಿ ಘಾಟ್ ಮೂಲಕ ಸಂಚರಿಸುವವರ ಗಮನಕ್ಕೆ: ಎಲ್ಲಾ ವಾಹನ ಸಂಚಾರ ನಿರ್ಬಂಧ

ನಿರಂತರ ಮಳೆಯಿಂದಾಗಿ ಭೂಕುಸಿತವಾಗುತ್ತಿರುವ ಕಾರಣ ಶಿರಾಡಿ ಘಾಟ್ ನಲ್ಲಿ ಸಂಚಾರ ನಿರ್ಬಂಧಿಸಲಾಗಿದೆ.

ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಹಾಸನದಿಂದ ಮಾರನಹಳ್ಳಿಯವರೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರ ನಿರ್ಬಂಧಿಸಿ ಜಿಲ್ಲಾಧಿಕಾರಿ ಸತ್ಯಭಾಮಾ ಸಿ. ಆದೇಶಿಸಿದ್ದಾರೆ. ಬೆಂಗಳೂರು ಮಂಗಳೂರು ಹೆದ್ದಾರಿಯ ಹಾಸನದಿಂದ ಮಾರನಹಳ್ಳಿಯವರೆಗಿನ ರಸ್ತೆಯಲ್ಲಿ ಯಾವುದೇ ಘಟನೆಗಳು ನಡೆಯದಂತೆ ತಡೆಯುವ ಸಲುವಾಗಿ, ಸಾರ್ವಜನಿಕರ ಹಿತದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ಜುಲೈ 18 ರಿಂದ ದುರಸ್ತಿ ಕಾರ್ಯ ಪೂರ್ಣಗೊಳ್ಳುವವರೆಗೆ ಎಲ್ಲಾ ರೀತಿಯ ವಾಹನ ಸಂಚಾರ ನಿರ್ಬಂಧಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಇನ್ನು ಬೆಂಗಳೂರಿನಿಂದ ಮಂಗಳೂರಿಗೆ ಬದಲಿ ಮಾರ್ಗವಾಗಿ ಹಾಸನ- ಬೇಲೂರು- ಮೂಡಿಗೆರೆ- ಚಾರ್ಮಾಡಿ ಘಾಟ್ ಅನ್ನು ಬಳಸಬಹುದಾಗಿದೆ.

ಇನ್ನು ಚಾರ್ಮಾಡಿ ಘಾಟ್‌ನಲ್ಲಿ ಭಾರಿ ಪ್ರಮಾಣದ ವಾಹನಗಳ ಸಂಚಾರ ಶುರುವಾಗಿದೆ. ಈಗಾಗಲೇ ಚಾರ್ಮಾಡಿ ರಸ್ತೆಯಲ್ಲಿ ಬಿರುಕು ಮೂಡಿದ್ದು ಭಯದಿಂದಲೇ ವಾಹನ ಸಂಚಾರರು ಪ್ರಯಾಣಿಸಬೇಕಿದೆ. ಚಾರ್ಮಾಡಿ ಘಾಟ್‌ನಲ್ಲಿ ಕೂಡ ದಾಖಲೆ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಭಾರಿ ಪ್ರಮಾಣದ ವಾಹನಗಳನ್ನು ಈ ರಸ್ತೆಯಲ್ಲಿ ನಿಷೇಧಿಸಲಾಗಿದೆ. ಚಾರ್ಮಾಡಿ ಘಾಟ್ ರಸ್ತೆಯ ಅಲ್ಲಲ್ಲಿ ರಸ್ತೆ ಹಾಗೂ ತಡೆಗೋಡೆ ಬಿರುಕು ಬಿಟ್ಟಿದ್ದು, ಮಿತಿ ಮೀರಿದ ವಾಹನಗಳು ಸಂಚರಿಸಿದರೆ ಮತ್ತಷ್ಟು ದುರಂತ ಸಂಭವಿಸುವ ಅಪಾಯವಿದೆ.

ಮಳೆಯ ಆರ್ಭಟ; ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕ ನಿರ್ಮಾಣ

ಕೊಪ್ಪ: ಭಾರಿ ಮಳೆಯಿಂದಾಗಿ ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕವೊಂದು ಸೃಷ್ಟಿಯಾಗಿದೆ. ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಮೇಗೂರು ಗ್ರಾಮದಲ್ಲಿ ಮನೆಯ ಮುಂಭಾಗವೇ 30 ಅಡಿ ಆಳದ ಕಂದಕ ಸೃಷ್ಟಿಯಾಗಿದೆ.

ಗ್ರಾಮದ ಪ್ರೇಮ ಬಾಬು ಗೌಡ ಎಂಬುವವರ ಮನೆ ಮುಂದೆ ಕಂದಕ ಸೃಷ್ಟಿಯಾಗಿದ್ದು, ವಿಚಿತ್ರ ಕಂದಕ ಕಂಡು ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ಕಂದಕದ ಒಳಗಿಂದ ಭೂಮಿ ಒಳಗೆ ನೀರಿನ ಬುಗ್ಗೆ ಹರಿಯುತ್ತಿದೆ. ಬಾವಿ ಆಕಾರದಲ್ಲಿ ಕಂದಕ ಸೃಷ್ಟಿಯಾಗಿದೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.