ಚಿಕ್ಕಮಗಳೂರು:(ನ್ಯೂಸ್ ಮಲ್ನಾಡ್ ವರದಿ) ಕಾಡಾನೆ ಸೆರೆಗೆ ಆಗಮಿಸಿದ ಸಾಕಾನೆಯೇ ಕೆಲಹೊತ್ತು ನಾಪತ್ತೆಯಾಗಿ ಒಂದು ಗಂಟೆಯ ನಂತರ ಪತ್ತೆಯಾಗಿದ ಘಟನೆ ಚಿಕ್ಕಮಗಳೂರು ತಾಲೂಕಿನ ಹುಣಸೇಹಳ್ಳಿ ಅರಣ್ಯ ಪ್ರದೇಶದಲ್ಲಿ ನಿನ್ನೆ ನಡೆದಿದೆ.
ಹೌದು, ಇತ್ತೀಚೆಗೆ ಚಿಕ್ಕಮಗಳೂರು ತಾಲೂಕಿನ ಹುಣಸೇಹಳ್ಳಿ ಗ್ರಾಮದ ಅರಣ್ಯ ವ್ಯಾಪ್ತಿಯಲ್ಲಿ ಕಾರ್ಮಿಕ ಯಲ್ಲಪ್ಪ ಎಂಬುವವರು ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟಿದ್ದರು. ಕಾಡಾನೆ ಸೆರೆಗೆ ಅರಣ್ಯ ಇಲಾಖೆ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆ ಸಕ್ರೆಬೈಲಿನಿಂದ ಸಾಕಾನೆಗಳನ್ನು ಕರೆಸಿಕೊಳ್ಳಲಾಗಿತ್ತು.

ಇದನ್ನೂ ಓದಿ; ಯುವನಿಧಿ ನೋಂದಣಿ ಆರಂಭ; ನೋಂದಣಿ ಮಾಡಿಕೊಳ್ಳುವುದು ಹೇಗೆ; ಏನೆಲ್ಲಾ ಅರ್ಹತೆ ಇರಬೇಕು
ಶುಕ್ರವಾರ ಸಾಕಾನೆಗಳೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಮದವೇರಿದ ಕಾಡಾನೆ ಏಕಾಏಕಿ ದಾಳಿಗೆ ಮುಂದಾಗಿದೆ. ಆನೆಗಳ ಕಾದಾಟದ ಸಂದರ್ಭದಲ್ಲಿ ಜೂನಿಯರ್ ಅರ್ಜುನ ಆನೆ ದಿಕ್ಕಾಪಾಲಾಗಿ ಓಡಿ ಕಾಡಿನೊಳಗೆ ನಾಪತ್ತೆಯಾಗಿತ್ತು. ಮದವೇರಿದ ಕಾಡಾನೆ ಭೀತಿ, ಮತ್ತೊಂದು ಕಡೆ ಕಾರ್ಯಾಚರಣೆಯ ಪ್ರಮುಖ ಆನೆಯೇ ನಾಪತ್ತೆಯಾದ ಕಾರಣ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಇಟಿಎಫ್ ಸಿಬ್ಬಂದಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ಒಂದು ಗಂಟೆಯ ಕಾಲ ಅರಣ್ಯದಾದ್ಯಂತ ಹುಡುಕಾಟ ನಡೆಸಿದ ನಂತರ ಸಾಕಾನೆ ಜೂನಿಯರ್ ಅರ್ಜುನ ಪತ್ತೆಯಾಗಿದ್ದ.
ಬಲಿಷ್ಠ ಗಂಡು ಕಾಡಾನೆಗೆ ಮದವೇರಿರುವುದರಿಂದ ಅರಣ್ಯಾಧಿಕಾರಿಗಳಿಗೆ ಕಾಡಾನೆ ಕಾರ್ಯಾಚರಣೆ ಸವಾಲಾಗಿ ಪರಿಣಮಿಸಿದೆ. ಸದ್ಯಕ್ಕೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿ ಸಿಬ್ಬಂದಿಗಳು ಹಿಂದಿರುಗಿದ್ದಾರೆ. ಸುತ್ತಮುತ್ತಲಿನ ಹಳ್ಳಿಗರು, ಕಾಫಿ ತೋಟದ ಕಾರ್ಮಿಕರು, ವಾಹನ ಸವಾರರು ಎಚ್ಚರಿಕೆಯಿಂದ ಇರುವಂತೆ ಅರಣ್ಯ ಇಲಾಖೆ ಸೂಚನೆ ನೀಡಿದೆ.












