ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಮುತ್ತೋಡಿ ಅಭಯಾರಣ್ಯದ ಮುಖ್ಯ ರಸ್ತೆಯಲ್ಲಿ ಮಂಗಳವಾರ ಮುಂಜಾನೆ ಕರಡಿಯೊಂದು ಹಠಾತ್ತನೆ ಪ್ರತ್ಯಕ್ಷವಾಗಿ ವಾಹನ ಸವಾರರಲ್ಲಿ ಕೆಲಕಾಲ ಆತಂಕ ಹಾಗೂ ರೋಮಾಂಚನ ಮೂಡಿಸಿದ ಘಟನೆ ನಡೆದಿದೆ.
ಅಭಯಾರಣ್ಯದ ದಟ್ಟ ಅರಣ್ಯದ ರಸ್ತೆಯಲ್ಲಿ ವಾಹನವೊಂದು ಸಾಗುತ್ತಿದ್ದ ವೇಳೆ ಏಕಾಏಕಿ ಕರಡಿಯೊಂದು ರಸ್ತೆಯ ಮಧ್ಯಭಾಗದಲ್ಲೇ ಕಾಣಿಸಿಕೊಂಡಿದೆ. ವಾಹನದ ಹೆಡ್ಲೈಟ್ ಬೆಳಕು ಬಿದ್ದರೂ ಯಾವುದೇ ಆತಂಕವಿಲ್ಲದೆ ಕರಡಿ ಗಂಭೀರವಾಗಿ ರಸ್ತೆಯುದ್ದಕ್ಕೂ ಹೆಜ್ಜೆ ಹಾಕುತ್ತಾ ಸಾಗಿರುವುದು ಗಮನಸೆಳೆದಿದೆ.

ವಾಹನವು ತನ್ನನ್ನು ಹಿಂಬಾಲಿಸುತ್ತಿದ್ದರೂ ತಲೆಕೆಡಿಸಿಕೊಳ್ಳದ ಕರಡಿ ಕೆಲದೂರ ಮುಂದೆ ಹೋಗಿ ರಸ್ತೆ ಮಧ್ಯದಲ್ಲೇ ನಿಂತು ಒಮ್ಮೆ ವಾಹನದತ್ತ ತಿರುಗಿ ದಿಟ್ಟಿಸಿ ನೋಡಿದೆ. ಈ ದೃಶ್ಯ ಕಂಡ ಸವಾರರು ಕೆಲಕಾಲ ಬೆಚ್ಚಿಬಿದ್ದಿದ್ದಾರೆ.
ಬಳಿಕ ರಸ್ತೆ ಬದಿಯ ಪೊದೆಯತ್ತ ಸರಿದ ಕರಡಿ, ತನ್ನ ಹಿಂಗಾಲುಗಳ ಮೇಲೆ ಎದ್ದು ನಿಂತು ವಾಹನವನ್ನು ಸೂಕ್ಷ್ಮವಾಗಿ ಗಮನಿಸಿದೆ. ಕೆಲ ಹೊತ್ತಿನ ಬಳಿಕ ಕರಡಿ ನಿಧಾನವಾಗಿ ಹೆಜ್ಜೆ ಹಾಕುತ್ತಾ ದಟ್ಟ ಕಾಡಿನೊಳಗೆ ಕಣ್ಮರೆಯಾಗಿದೆ.












