ಚಿಕ್ಕಮಗಳೂರು/ಬೆಂಗಳೂರು: (ನ್ಯೂಸ್ ಮಲ್ನಾಡ್ ವರದಿ) ನಕಲಿ ಇನಾಂ ಭೂಮಿ ದಾಖಲೆಗಳನ್ನು ಸೃಷ್ಟಿಸಿ ಸಾವಿರಾರು ಎಕರೆ ಸರ್ಕಾರಿ ಹಾಗೂ ಅರಣ್ಯ ಭೂಮಿಯನ್ನು ಕಬಳಿಸಲು ಯತ್ನಿಸಿದ್ದ ವಂಚನೆ ಪ್ರಕರಣವನ್ನು ಮೂಡಿಗೆರೆ ಪೊಲೀಸರು ಭೇದಿಸಿದ್ದು, ವಂಚಕ ಮನ್ಮಥ್ ಗೌಡನನ್ನು ಬಂಧಿಸಿದ್ದಾರೆ. ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಡಿ ಈ ಬಂಧನ ನಡೆದಿದೆ.
ಇದನ್ನೂ ಓದಿ: ಏರ್ಟೆಲ್, ಜಿಯೋ ರೀಚಾರ್ಜ್ ಯೋಜನೆ ಬೆಲೆ ಹೆಚ್ಚಳ?; ಜನಪ್ರಿಯ ಯೋಜನೆಗಳು ಸಹ ದುಬಾರಿ

ಮೂಡಿಗೆರೆ ತಾಲೂಕಿನಲ್ಲಿ ಸುಮಾರು 500 ಎಕರೆ ಭೂಮಿಗೆ ತನ್ನ ಪೂರ್ವಜರದ್ದು ಎಂದು ನಕಲಿ ದಾಖಲೆಗಳನ್ನು ಸೃಷ್ಟಿಸಿ, ಅವುಗಳನ್ನು ತನ್ನ ಹೆಸರಿಗೆ ಮಾಡಿಸಿಕೊಳ್ಳಲು ಅರ್ಜಿ ಸಲ್ಲಿಸಿದ್ದಾನೆ ಎಂಬ ಆರೋಪ ಮನ್ಮಥ್ ಗೌಡನ ಮೇಲಿದ್ದು, ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಸುಮಾರು 1500 ಎಕರೆ ಭೂಮಿ ಕಬಳಿಕೆಗೂ ಸಂಚು ರೂಪಿಸಿದ್ದಾನೆ ಎಂದು ತನಿಖೆಯಿಂದ ತಿಳಿದು ಬಂದಿದೆ.
ಮೂಡಿಗೆರೆ ತಹಶಿಲ್ದಾರ್ ಅಶ್ವಿನಿ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿತ್ತು. ತನಿಖೆಯ ವೇಳೆ ಆರೋಪಿಯು ಸಂಪೂರ್ಣ ದಾಖಲೆಗಳನ್ನು ನಕಲಿ ಮಾಡಿರುವುದು ಬೆಳಕಿಗೆ ಬಂದಿದೆ. ಮನ್ಮಥ್ ಗೌಡ ಮೂಲತಃ ಮೂಡಿಗೆರೆ ತಾಲೂಕಿನ ಮರೆಬೈಲು ನಿವಾಸಿಯಾಗಿದ್ದು, ಕಡೂರಿನಲ್ಲಿ ತಲೆಮರಿಸಿಕೊಂಡಿದ್ದ ವೇಳೆ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ಪರೀಕ್ಷಾ ಪೇ ಚರ್ಚಾ ನೋಂದಣಿ ಪ್ರಾರಂಭ; ಏನಿದು ಪರೀಕ್ಷಾ ಪೇ ಚರ್ಚಾ
ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರ ಸೂಚನೆಯ ಮೇರೆಗೆ ತನಿಖೆ ಆರಂಭವಾಗಿದ್ದು, ಇನಾಂ ಭೂಮಿ ಹೆಸರಿನಲ್ಲಿ ಅರಣ್ಯ ಹಾಗೂ ಕಂದಾಯ ಭೂಮಿಯನ್ನು ಕಬಳಿಸಲು ನಡೆದ ಸಂಚು ಬಯಲಾಗಿತ್ತು. ಮನ್ಮಥ್ ಗೌಡ ಹಿಂದೆ ಪ್ರಭಾವಿಗಳ ಕೈವಾಡ ಇರುವ ಸಾಧ್ಯತೆ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಈ ಸಂಬಂಧ COD ತನಿಖೆಗೂ ಸೂಚನೆ ನೀಡುವುದಾಗಿ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಪ್ರಕರಣದ ತನಿಖೆಯನ್ನು ಮುಂದುವರೆಸಿರುವ ಮೂಡಿಗೆರೆ ಪೊಲೀಸರು, ವಂಚನೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದಾರೆ. (ವರದಿ- ತನು ಕೊಟ್ಟಿಗೆಹಾರ)












