ಎನ್. ಆರ್. ಪುರ: (ನ್ಯೂಸ್ ಮಲ್ನಾಡ್ ವರದಿ) ರಾಜ್ಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮವು ದೇಶದಲ್ಲಿ ಪ್ರಥಮ ಸ್ಥಾನ ಪಡೆದು 2025ರ ರಾಷ್ಟ್ರೀಯ ಇಂಧನ ಸಂರಕ್ಷಣಾ ಪ್ರಶಸ್ತಿಗೆ (ಎನ್ಇಸಿಎ) ಭಾಜನವಾಗಿದೆ.
ಇದನ್ನೂ ಓದಿ: ಏರ್ಟೆಲ್, ಜಿಯೋ ರೀಚಾರ್ಜ್ ಯೋಜನೆ ಬೆಲೆ ಹೆಚ್ಚಳ?; ಜನಪ್ರಿಯ ಯೋಜನೆಗಳು ಸಹ ದುಬಾರಿ

ಭಾನುವಾರ ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ 35ನೇ ರಾಷ್ಟ್ರೀಯ ಇಂಧನ ಸಂರಕ್ಷಣಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಜ್ಯ ಸರ್ಕಾರದ ಪರವಾಗಿ ರಾಜ್ಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ ಅವರು ರಾಷ್ಟ್ರಪತಿ ಬ್ರೌಪದಿ ಮುರ್ಮ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.
ರಾಜ್ಯದಲ್ಲಿ ದಾಖಲೆ ಮಟ್ಟದ ಪವನ ವಿದ್ಯುತ್ ಉತ್ಪಾದನೆ, ಇಂಧನ ಸಂರಕ್ಷಣೆ ಹಾಗೂ ನವೀಕರಿಸಬಹುದಾದ ಶಕ್ತಿಯ ಬಳಕೆಯನ್ನು ಜನಸಾಮಾನ್ಯರ ಬದುಕಿನ ಭಾಗವನ್ನಾಗಿಸುವ ನಿಟ್ಟಿನಲ್ಲಿ ಕೈಗೊಂಡ ಯೋಜನೆಗಳು, ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಸಮಗ್ರ ಹಾಗೂ ಶಾಶ್ವತ ಸಾಧನೆ, ಸೂರ್ಯಶಕ್ತಿ ಹಾಗೂ ಹಸಿರು ಇಂಧನ ಆಧಾರಿತ ಕಾರ್ಯಕ್ರಮಗಳು, ಶಕ್ತಿ ಸಂರಕ್ಷಣೆ ಮತ್ತು ಹಸಿರು ಶಕ್ತಿ ಉತ್ತೇಜನದಲ್ಲಿ ಕರ್ನಾಟಕದ ಮುನ್ನಡೆಗೆ ರಾಷ್ಟ್ರಮಟ್ಟದ ಮಾನ್ಯತೆ ಈ ಪ್ರಶಸ್ತಿಗೆ ಭದ್ರವಾದ ಅಡಿಪಾಯವಾಗಿವೆ. ಗ್ರಾಮೀಣದಿಂದ ನಗರವರೆಗೆ ಸಮಾನವಾಗಿ ಶಾಶ್ವತ ಶಕ್ತಿ ತಲುಪಿಸುವ ಗುರಿಯೊಂದಿಗೆ ಕಾರ್ಯನಿರ್ವಹಿಸಿದ ನಿಗಮದ ಸಾಧನೆಯನ್ನು ರಾಷ್ಟ್ರವೇ ಮೆಚ್ಚಿಕೊಂಡಿದೆ. ಈ ಪ್ರಶಸ್ತಿ ಮುಂದಿನ ಪೀಳಿಗೆಗೆ ಶುದ್ಧ, ಸುರಕ್ಷಿತ ಮತ್ತು ಸುಸ್ಥಿರ ಇಂಧನದ ಕನಸನ್ನು ಸಾಕಾರಗೊಳಿಸುವ ದಿಕ್ಕಿನಲ್ಲಿ ಹೊಸ ಉತ್ಸಾಹ ನೀಡಿದೆ ಎಂದು ಪ್ರಶಸ್ತಿಯಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಪರೀಕ್ಷಾ ಪೇ ಚರ್ಚಾ ನೋಂದಣಿ ಪ್ರಾರಂಭ; ಏನಿದು ಪರೀಕ್ಷಾ ಪೇ ಚರ್ಚಾ












