ತೀರ್ಥಹಳ್ಳಿ: ಬೆಳೆ ವಿಮೆ ಪಾವತಿಯಲ್ಲಿ ತಾರತಮ್ಯ ಆರೋಪ: ರೈತರ ಪ್ರತಿಭಟನೆ

ತೀರ್ಥಹಳ್ಳಿ: (ನ್ಯೂಸ್ ಮಲ್ನಾಡ್ ವರದಿ) ಬೆಳೆ ವಿಮೆ ಪಾವತಿಯಲ್ಲಿ ರೈತರಿಗೆ ತಾರತಮ್ಯ ಮಾಡಲಾಗುತ್ತಿದ್ದು, ವಿಮಾ ಕಂಪನಿಗಳು ನಿರಂತರವಾಗಿ ಅನ್ಯಾಯ ಎಸಗುತ್ತಿವೆ ಎಂದು ಆರೋಪಿಸಿ ಕಟ್ಟೇಹಕ್ಕಲು, ಶೇಡ್ತಾರ್ ಹಾಗೂ ಹೆದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರು ತೋಟಗಾರಿಕೆ ಇಲಾಖೆ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ರೈತ ಮುಖಂಡ ಪಣಿರಾಜ್, ಬೆಳೆ ವಿಮೆ ಮಾಡಿಸುವ ಸಂದರ್ಭದಲ್ಲಿ ರೈತರನ್ನು ಪ್ರೇರೇಪಿಸುವ ಆಡಳಿತ ವ್ಯವಸ್ಥೆ, ಪರಿಹಾರ ವಿತರಣೆ ವೇಳೆ ಮೌನ ವಹಿಸಿರುವುದು ಸರಿಯಲ್ಲ. ವಿಮೆ ಸರಿಯಾಗಿ ಪಾವತಿಸದೆ ರೈತರಿಗೆ ಅನ್ಯಾಯ ಮಾಡಿರುವ ವಿಮಾ ಏಜೆನ್ಸಿ ರೈತರೊಂದಿಗೆ ನೇರ ಚರ್ಚೆಗೆ ಬರಬೇಕು ಎಂದು ಆಗ್ರಹಿಸಿದರು.

ರೈತರಿಗೆ ಆಗಿರುವ ತಾರತಮ್ಯವನ್ನು ಕೂಡಲೇ ಸರಿಪಡಿಸಬೇಕು. ಕಡಿಮೆ ವಿಮಾ ಪರಿಹಾರ ಪಡೆದ ಅರ್ಹ ರೈತರಿಗೆ ನ್ಯಾಯ ಒದಗಿಸಬೇಕು. ವಿಮಾ ಕಂಪನಿಯು ಪರಿಹಾರ ನಿಗದಿಪಡಿಸಿರುವ ಸಂಪೂರ್ಣ ಲೆಕ್ಕಾಚಾರವನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನಾಕಾರರು ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಮಳೆಯ ಪ್ರಮಾಣ ತೀವ್ರವಾಗಿ ಕುಸಿದಿದ್ದು, ವಿಮಾ ಕಂಪನಿಯನ್ನು ನಂಬಿ ರೈತರು ಬೆಳೆ ವಿಮೆ ಮಾಡಿಸಿದ್ದಾರೆ. ಆದರೆ ಅಕ್ಕಪಕ್ಕದ ಗ್ರಾಮಗಳ ರೈತರಿಗೆ ಪಾವತಿಯಾಗಿರುವ ವಿಮಾ ಮೊತ್ತದಲ್ಲಿ ಭಾರಿ ವ್ಯತ್ಯಾಸ ಕಂಡುಬಂದಿದೆ. ಒಬ್ಬ ರೈತನಿಗೆ ₹72 ಸಾವಿರ ಪರಿಹಾರ ಬಂದಿದ್ದರೆ, ಮತ್ತೊಬ್ಬ ರೈತನಿಗೆ ಕೇವಲ ₹14 ಸಾವಿರ ಮಾತ್ರ ಬಂದಿದೆ. ಇಂತಹ ತಾರತಮ್ಯಕ್ಕೆ ಕಾರಣವೇನು ಎಂಬುದನ್ನು ವಿಮಾ ಕಂಪನಿ ಸ್ಪಷ್ಟಪಡಿಸಬೇಕು. ವಿಮೆ ಮಾಡಿಸಲು ಉತ್ತೇಜನ ನೀಡಿದ ತೋಟಗಾರಿಕೆ ಇಲಾಖೆ ಹಾಗೂ ತಾಲ್ಲೂಕು ಆಡಳಿತ ವಿಮಾ ಕಂಪನಿಯ ಪ್ರತಿನಿಧಿಗಳನ್ನು ರೈತರೊಂದಿಗೆ ನೇರ ಸಂವಾದಕ್ಕೆ ಕರೆತರಬೇಕು ಎಂದು ಆಗ್ರಹಿಸಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ಕೇಳೂರು ಮಿತ್ರ ಮಾತನಾಡಿ, ಕಳೆದ ಮೂರ್ನಾಲ್ಕು ವರ್ಷಗಳಿಂದ ವಿಮಾ ಕಂಪನಿಗಳು ರೈತರಿಗೆ ಅನ್ಯಾಯ ಮಾಡುತ್ತಿವೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಳವಡಿಸಿರುವ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರದ (ಕೆಎಸ್‌ಎನ್‌ಡಿಎಂಸಿ) ಮಳೆ ಮಾಪನ ಕೇಂದ್ರಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಮಳೆ ಬೀಳುವ ಪ್ರದೇಶ ಮತ್ತು ಮಳೆ ಕೊರತೆಯಿರುವ ಪ್ರದೇಶಗಳ ನಡುವಿನ ವ್ಯತ್ಯಾಸವನ್ನು ಗುರುತಿಸುವಲ್ಲಿ ಮಳೆ ಮಾಪನ ವ್ಯವಸ್ಥೆ ವಿಫಲವಾಗಿದೆ. ತಾಲ್ಲೂಕಿನಲ್ಲಿ ಕೇವಲ ಏಳೆಂಟು ಮಳೆ ಮಾಪನ ಕೇಂದ್ರಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಇಂತಹ ವ್ಯವಸ್ಥೆಯಿಂದ ರೈತರಿಗೆ ಹೇಗೆ ನ್ಯಾಯ ಸಿಗಲು ಸಾಧ್ಯ ಎಂದು ಪ್ರಶ್ನಿಸಿದರು.

ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ರಂಜಿತ್ ಎಸ್. ಮಾತನಾಡಿ, ವಿಮೆ ಪಾವತಿಸಿರುವ ರೈತರಿಗೆ ಅದನ್ನು ಪ್ರಶ್ನಿಸುವ ಸಂಪೂರ್ಣ ಹಕ್ಕಿದೆ. ಟೆಂಡರ್ ಪ್ರಕ್ರಿಯೆಯಲ್ಲಿ ನಿರ್ದಿಷ್ಟ ಷರತ್ತುಗಳನ್ನು ವಿಧಿಸಲಾಗಿರುತ್ತದೆ. ಮೂರನೇ ವ್ಯಕ್ತಿಯ ಪಾತ್ರವನ್ನೂ ಪರಿಶೀಲಿಸದೆ ಅಧಿಕಾರಿಗಳನ್ನು ಹೊಣೆ ಮಾಡುವುದು ಸರಿಯಲ್ಲ. ಟರ್ಮ್‌ಶೀಟ್‌ನಲ್ಲಿ ಮಾಡಿರುವ ಪರಿಷ್ಕರಣೆಯ ಆಧಾರದಲ್ಲಿ ಪರಿಹಾರ ದೊರಕಿಸಿಕೊಡಲು ಕ್ರಮ ಕೈಗೊಳ್ಳಲಾಗುವುದು. ವಿಮಾ ಕಂಪನಿಯ ಗುತ್ತಿಗೆದಾರರನ್ನು ಕರೆಸಿ ರೈತರೊಂದಿಗೆ ನೇರ ಸಂವಾದ ನಡೆಸಲಾಗುವುದು. ಸಮಸ್ಯೆ ಬಗೆಹರಿಸಲು 15 ದಿನಗಳ ಕಾಲಾವಕಾಶ ನೀಡುವಂತೆ ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಕೆಡಿಪಿ ಸದಸ್ಯರಾದ ಕರುಣಾಕರ ಮಾದ್ಲು, ಪೂರ್ಣೇಶ್ ಕೆಳಕೆರೆ, ಮುಖಂಡರಾದ ಚಂದ್ರಶೇಖರ, ಕಲ್ಲುಂಡಿ ಸಂದೀಪ್, ಆದರ್ಶ ಹುಂಚದಕಟ್ಟೆ, ಕುಡುಮಲ್ಲಿಗೆ ಸಂದೀಪ್ ಸೇರಿದಂತೆ ಹಲವು ರೈತರು ಭಾಗವಹಿಸಿದ್ದರು.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.