ಕೊಟ್ಟಿಗೆಹಾರ: (ನ್ಯೂಸ್ ಮಲ್ನಾಡ್ ವರದಿ) ಬೆಳೆ ವಿಮೆ ಪಾವತಿಯಲ್ಲಿ ಗೊಂದಲ ಉಂಟಾಗಿ ಮೂಡಿಗೆರೆ ಹಾಗೂ ಕಳಸ ತಾಲ್ಲೂಕಿನ ರೈತರು ಸಂಕಷ್ಟಕ್ಕೆ ಸಿಲುಕಿರುವ ಘಟನೆ ಈಗ ಗಂಭೀರ ಸ್ವರೂಪ ಪಡೆದಿದೆ.
ಇದನ್ನೂ ಓದಿ: ಪಿಎಂ-ಕಿಸಾನ್ 21ನೇ ಕಂತು ಬಿಡುಗಡೆ ಮಾಡಿದ ಪ್ರಧಾನಿ ಮೋದಿ: 9 ಕೋಟಿ ರೈತರಿಗೆ ಒಟ್ಟು 18,000 ಕೋಟಿ ರೂ. ಹಣ ಸಂದಾಯ

2024–25 ಸಾಲಿನಲ್ಲಿ ಬೆಳೆ ವಿಮೆ ಪಾವತಿಸಿದರೂ ಪರಿಹಾರ ಹಣ ಬಹುತೇಕ ರೈತರಿಗೆ ತಲುಪದೆ ಇದ್ದದೇ ಅಲ್ಲದೆ, ಕೆಲವರ ಖಾತೆಗೆ ಕೆಲವೇ ನೂರು ರೂಪಾಯಿಗಳು ಜಮಾ ಆಗಿರುವುದರಿಂದ ವಿಮಾ ಸಂಸ್ಥೆಗಳ ಮೇಲಿನ ಅಸಮಾಧಾನ ಹೆಚ್ಚಾಗಿದೆ. ಹವಾಮಾನ ವೈಪರೀತ್ಯದಿಂದ ಶೇಕಡಾ 35ರಷ್ಟು ಪ್ರದೇಶದಲ್ಲಿ ಬೆಳೆ ನಾಶವಾದರೂ ಇಪ್ಕೋ ಟೋಕಿಯೋ ವಿಮಾ ಕಂಪನಿ ನೀಡಿದ ಪರಿಹಾರದಲ್ಲಿ ಯಾವುದೇ ಪಾರದರ್ಶಕತೆ ಕಂಡುಬಂದಿಲ್ಲ. ಕೆಲವು ರೈತರಿಗೆ ₹25,000 ವರೆಗೆ ಹಣ ಸಿಕ್ಕಿದ್ದರೆ, ಕೆಲವರಿಗೆ ಕೇವಲ ₹200 ಮಾತ್ರ ಬಂದಿರುವುದು ಗಂಭೀರ ಅನುಮಾನಕ್ಕೆ ಕಾರಣವಾಗಿದೆ. ಇನ್ನು ಅನೇಕ ರೈತರಿಗೆ ಒಂದು ರೂಪಾಯಿಯೂ ಸಿಕ್ಕಿಲ್ಲ.
ವಿಮೆ ಹಣದ ಬಗ್ಗೆ ವಿಚಾರಿಸಲು ಬ್ಯಾಂಕ್ಗೆ ಹೋಗಿದರೆ ‘ವಿಮೆ ಕಂಪನಿಯೊಡನೆ ಸಂಪರ್ಕಿಸಿ’ ಎಂದು ಹೇಳಲಾಗುತ್ತದೆ. ಆದರೆ ಕಂಪನಿಯ ವಿವರಗಳು, ಸಂಪರ್ಕ ಮತ್ತು ಮಾಹಿತಿ ರೈತರಿಗೆ ಲಭ್ಯವಿಲ್ಲ. ಹೀಗಾಗಿ ರೈತರು ಮಾಹಿತಿ ಹುಡುಕುತ್ತ ಕಚೇರಿಗಳ ಸುತ್ತ ಓಡಾಡುವ ಪರಿಸ್ಥಿತಿ ಎದುರಾಗಿದೆ.
ಮೂಡಿಗೆರೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್. ಬಾಲಕೃಷ್ಣ ಬಾಳೂರು ಅವರು ಮಾತನಾಡಿ, ಭಾರೀ ಮಳೆಯಿಂದ ಕೃಷಿ ನಾಶವಾದರೂ ಪರಿಹಾರ ನೀಡುವಲ್ಲಿ ಸ್ಪಷ್ಟತೆ ಇಲ್ಲ. ವಿಮೆ ಕಟ್ಟಿದ ರೈತರು ಕಂಗಾಲಾಗಿದ್ದಾರೆ. ಸರ್ಕಾರ, ತೋಟಗಾರಿಕೆ ಇಲಾಖೆ ಮತ್ತು ವಿಮಾ ಸಂಸ್ಥೆಗಳು ಸ್ಪಷ್ಟ ಮಾಹಿತಿ ನೀಡಿ ನ್ಯಾಯಸಮ್ಮತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: ಆಲದ ಮರದ ನೆರಳಿನಲ್ಲಿ ಶುರುವಾದ ಭಾರತೀಯ ಸ್ಟಾಕ್ ಮಾರ್ಕೆಟ್ – ಇಂದು 400 ಲಕ್ಷ ಕೋಟಿಯ ಮೌಲ್ಯ!
ಮಳೆಮಾಪನ ಕೇಂದ್ರಗಳು ಸರಿಯಾಗಿ ಕಾರ್ಯನಿರ್ವಹಿಸದಿರುವುದು ಮತ್ತೊಂದು ಪ್ರಶ್ನೆಯಾಗಿದ್ದು, ಹಾನಿ ಅಂದಾಜು ಯಾವ ಆಧಾರದಲ್ಲಿ ಮಾಡಲಾಗುತ್ತಿದೆ ಎಂಬುದರ ಮೇಲೂ ಸಂಶಯ ವ್ಯಕ್ತವಾಗಿದೆ. ರೈತರ ಪ್ರಕಾರ ವಿಮಾ ಕಂಪನಿ, ಬ್ಯಾಂಕ್, ಇಲಾಖೆ – ಯಾರಿಂದಲೂ ಸ್ಪಷ್ಟ ಉತ್ತರ ಸಿಗದಿರುವುದು ಪರಿಸ್ಥಿತಿಯನ್ನು ಇನ್ನಷ್ಟು ಗೊಂದಲಗೊಳಿಸಿದೆ.
ವಿಮೆ ಸಂಸ್ಥೆಗಳು ನಷ್ಟದ ಪ್ರಮಾಣಕ್ಕೆ ತಕ್ಕ ಪರಿಹಾರ ನೀಡಬೇಕು. ತೋಟಗಾರಿಕೆ ಇಲಾಖೆ ಮಧ್ಯಪ್ರವೇಶಿಸದೆ ಇರುವುದರಿಂದ ಯೋಜನೆಯ ಅಸ್ತಿತ್ವವೇ ಪ್ರಶ್ನಾರ್ಥಕವಾಗಿದೆ. ಸರ್ಕಾರ ತಕ್ಷಣ ಕ್ರಮ ಕೈಗೊಂಡು ವಿಮೆ ಪಾವತಿಯಲ್ಲಿ ಪಾರದರ್ಶಕತೆ ತರಬೇಕು ಎಂದು ಬೆಳೆಗಾರರ ಸಂಘದ ಕಾರ್ಯದರ್ಶಿ ಕೆ.ಡಿ. ಮನೋಹರ್ ಹೇಳಿದ್ದಾರೆ. (ವರದಿ- ತನು ಕೊಟ್ಟಿಗೆಹಾರ)












