ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ಸೂಕ್ಷ್ಮ ಪ್ರದೇಶವಾದ ಆರ್ಎಂಎಲ್ ನಗರದಲ್ಲಿ ಈದ್ ಮಿಲಾದ್ ಸಂಭ್ರಮಾಚರಣೆ ವೇಳೆ ಕಟೌಟ್ ಮೇಲೆ ನಿಂತು ಪ್ಯಾಲೆಸ್ತೀನ್ ಧ್ವಜ ಹಾರಿಸಿದ ಘಟನೆಗೆ ಸಂಬಂಧಿಸಿದಂತೆ ದೊಡ್ಡಪೇಟೆ ಪೊಲೀಸರು ಸುಮಟೊ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಿಹಾಲ್ ಅಲಿಯಾಸ್ ಬೆಕ್ಕು, ಉಮರ್ ಹಾಗೂ ಅಬ್ರಹಾರ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಈದ್ ಮಿಲಾದ್ ಆಚರಣೆ ವೇಳೆ ಕಟೌಟ್ನ ಮೇಲ್ಭಾಗದಲ್ಲಿ ನಿಂತಿದ್ದ ಯುವಕನೊಬ್ಬ ಪ್ಯಾಲೆಸ್ತೀನ್ ಧ್ವಜ ಹಾರಿಸಿದ್ದಾನೆ ಎನ್ನಲಾಗಿದೆ. ಘಟನೆಯನ್ನು ಅಲ್ಲಿದ್ದ ಕೆಲವರು ಮೊಬೈಲ್ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.

ಸುಮಾರು 14 ಸೆಕೆಂಡ್ಗಳ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಘಟನೆಗೆ ಸಂಬಂಧಿಸಿದಂತೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಡಿಯೋ ಹಾಗೂ ಘಟನೆಯ ಹಿನ್ನೆಲೆಯನ್ನು ಪರಿಶೀಲಿಸಿ ತನಿಖೆ ಮುಂದುವರಿಸಿದ್ದಾರೆ.















