ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಸಾರ್ವಜನಿಕ ಸ್ಥಳದಲ್ಲಿ ಗಲಾಟೆ ಮಾಡುತ್ತಿದ್ದವರನ್ನು ಸಮಾಧಾನಪಡಿಸಲು ತೆರಳಿದ್ದ ಪೊಲೀಸ್ ಸಿಬ್ಬಂದಿಯ ಮೊಬೈಲ್ ಫೋನ್ ಕಸಿದು ನೆಲಕ್ಕೆ ಒಡೆದು, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಒಬ್ಬ ಯುವಕ ಸೇರಿದಂತೆ ಮೂವರ ವಿರುದ್ಧ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳವಾರ (ಜುಲೈ 21ರಂದು) ಸಂಜೆ ಸುಮಾರು 5 ಗಂಟೆಗೆ ಕೊಪ್ಪ ಪೊಲೀಸ್ ಠಾಣೆಯ ಪ್ರಕಾಶ್ ಅವರು ಮಫ್ತಿಯಲ್ಲಿ ಬಸ್ ನಿಲ್ದಾಣದ ಸುತ್ತಮುತ್ತ ಗಸ್ತು ತಿರುಗುತ್ತಿದ್ದರು. ಈ ವೇಳೆ ಜೆಎಂಜೆ ಆಟೋ ನಿಲ್ದಾಣದ ಬಳಿ ಮೂವರು ಯುವಕರು ಪರಸ್ಪರ ಕೈಕೈ ಮಿಲಾಯಿಸಿಕೊಂಡು, ಕೊರಳಪಟ್ಟಿ ಹಿಡಿದು ಅವಾಚ್ಯ ಶಬ್ದಗಳಿಂದ ನಿಂದಿಸಿಕೊಳ್ಳುತ್ತಾ ಗಲಾಟೆ ನಡೆಸುತ್ತಿರುವ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ತೆರಳಿದ ಪ್ರಕಾಶ್ ಅವರು ಗಲಾಟೆ ನಿಲ್ಲಿಸುವಂತೆ ಸೂಚಿಸಿದ್ದಾರೆ. ಆದರೆ ಯುವಕರು ಮಾತು ಕೇಳದೆ ಜಗಳ ಮುಂದುವರಿಸಿದ್ದಾರೆ. ಈ ವೇಳೆ ಪೊಲೀಸ್ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎನ್ನಲಾಗಿದೆ.

ಘಟನೆಯ ವಿಡಿಯೊ ಚಿತ್ರೀಕರಿಸಲು ಪ್ರಕಾಶ್ ಅವರು ತಮ್ಮ ಮೊಬೈಲ್ ಫೋನ್ ತೆಗೆದಾಗ, ಆರೋಪಿತ ಯುವಕ ಮೊಬೈಲ್ ಕಸಿದು ನೆಲಕ್ಕೆ ಎಸೆದು ಒಡೆದಿದ್ದಾನೆ. ಬಳಿಕ ಆತನೊಂದಿಗೆ ಇದ್ದ ಇನ್ನಿಬ್ಬರು ಸ್ಥಳದಿಂದ ಪರಾರಿಯಾಗಿದ್ದಾರೆ. ಸಾರ್ವಜನಿಕರ ಸಹಾಯದಿಂದ ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ನರಸೀಪುರ-ನಾರ್ವೆ ನಿವಾಸಿ ನಿತಿನ್ (24) ಎಂದು ಗುರುತಿಸಲಾಗಿದೆ.
ಬಳಿಕ ನಿತಿನ್ನನ್ನು ಠಾಣೆಗೆ ಕರೆತಂದು ನಿತಿನ್ ಹಾಗೂ ಆತನೊಂದಿಗೆ ಇದ್ದ ಇನ್ನಿಬ್ಬರ ವಿರುದ್ಧ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ವರದಿ- ಶಶಿ ಬೆತ್ತದಕೊಳಲು)












