ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ನಗರದ ಸೆಂಟ್ ಜೋಸೆಫ್ ಕಾನ್ವೆಂಟ್ ಶಾಲೆಯಲ್ಲಿ ಅಯ್ಯಪ್ಪ ಮಾಲೆ ಧರಿಸಿ ಬಂದ ವಿದ್ಯಾರ್ಥಿ ಕೆನ್ನೆಗೆ ಪ್ರಿನ್ಸಿಪಾಲ್ ಹೊಡೆದಿದ್ದು, ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಏರ್‌ಟೆಲ್, ಜಿಯೋ ರೀಚಾರ್ಜ್ ಯೋಜನೆ ಬೆಲೆ ಹೆಚ್ಚಳ?; ಜನಪ್ರಿಯ ಯೋಜನೆಗಳು ಸಹ ದುಬಾರಿ

7ನೇ ತರಗತಿ ಬಾಲಕನೊಬ್ಬ ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ಶಾಲೆಗೆ ಹಾಜರಾಗಿದ್ದ. ಇದನ್ನು ಕಂಡ ಶಾಲೆ ಪ್ರಿನ್ಸಿಪಾಲ್, ಯಾರನ್ನು ಕೇಳಿ ಮಾಲೆ ಹಾಕಿದ್ದೀಯಾ? ಎಂದು ಪ್ರಶ್ನಿಸಿ ಬಾಲಕನ ಕೆನ್ನೆಗೆ ಹೊಡೆದಿದ್ದಾರೆ ಎನ್ನಲಾಗಿದೆ. ಅಲ್ಲದೆ ಬನಿಯನ್ ಏಕೆ ಹಾಕಿಲ್ಲ ಎಂದು ವಿಚಾರಿಸಿ, ಶಬರಿಮಲೆ ಯಾತ್ರೆಗೆ ಹೋಗಲು ರಜೆ ನೀಡುವುದಿಲ್ಲ ಎಂದು ಗುಡುಗಿದ್ದಾರೆ. ‘ಇರುಮುಡಿಯನ್ನು ನಿಮ್ಮ ಅಪ್ಪನ ಕೈಯಲ್ಲಿ ಶಬರಿಮಲೆಗೆ ಕಳಿಸಿ, ನೀನು ಶಾಲೆಗೆ ಬರಬೇಕು’ ಎಂದು ಆಡಳಿತ ಮಂಡಳಿ ಬಾಲಕನಿಗೆ ತಾಕೀತು ಮಾಡಿದೆ ಎಂಬ ಆರೋಪ ಕೇಳಿಬಂದಿದೆ.
ವಿಷಯ ತಿಳಿಯುತ್ತಿದ್ದಂತೆಯೇ ವಿಶ್ವ ಹಿಂದು ಪರಿಷತ್, ಬಜರಂಗದಳದ ಕಾರ್ಯಕರ್ತರು ಮತ್ತು ಮಾಲಾಧಾರಿಗಳು ಶಾಲೆ ಮುಂದೆ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರದ ಆದೇಶ ಇಲ್ಲದಿದ್ದರೂ ಕ್ರಿಸ್‌ಮಸ್‌ಗೆ 15 ದಿನ ರಜೆ ನೀಡುವ ನೀವು, ಸಂಪ್ರದಾಯದಂತೆ ಶಬರಿಮಲೆಗೆ ಹೋಗುವ ಬಾಲಕನಿಗೆ ರಜೆ ನೀಡಲು ಯಾಕೆ ಹಿಂದೇಟು ಹಾಕುತ್ತೀರಿ? ದಸರಾ ರಜೆ ನೀಡಲು ಸತಾಯಿಸುವ ನಿಮಗೆ ಧಾರ್ಮಿಕ ಸ್ವಾತಂತ್ರ್ಯದ ಅರಿವಿಲ್ಲವೇ? ಎಂದು ಪ್ರತಿಭಟನಾಕಾರರು ಶಾಲಾ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡರು.
ಇದನ್ನೂ ಓದಿ: ಪರೀಕ್ಷಾ ಪೇ ಚರ್ಚಾ ನೋಂದಣಿ ಪ್ರಾರಂಭ; ಏನಿದು ಪರೀಕ್ಷಾ ಪೇ ಚರ್ಚಾ
ಮಕ್ಕಳ ಧಾರ್ಮಿಕ ಭಾವನೆಗೆ ಧಕ್ಕೆ ತಂದರೆ ಸುಮ್ಮನಿರುವುದಿಲ್ಲ. ಹಿಜಾಬ್ ವಿಚಾರದಲ್ಲಿ ಕಾನೂನು ಹೇಗಿದೆಯೋ, ಇಲ್ಲಿಯೂ ಹಾಗೆಯೇ ವರ್ತಿಸಿ. ಇಲ್ಲದಿದ್ದರೆ ನಿಮ್ಮ ಸಂಸ್ಥೆಯ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಶಾಲೆಯ ಪ್ರಿನ್ಸಿಪಾಲ್, ಪ್ರತಿಭಟನಾಕಾರರ ಮುಂದೆ ಬಂದು ನಮ್ಮಿಂದ ತಪ್ಪಾಗಿದ್ದರೆ ಕ್ಷಮಿಸಿ ಎಂದು ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.












