ಮೂಡಿಗೆರೆ: ಮಲೆನಾಡಿಗೆ ಕಳಪೆ ಗುಣಮಟ್ಟದ ರಾಗಿ ಪೂರೈಕೆ ಆರೋಪ

ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಸರಕಾರದ ಪಡಿತರ ವ್ಯವಸ್ಥೆಯಡಿ ವಿತರಣೆಗಾಗಿ ಪೂರೈಕೆಯಾಗಿರುವ ರಾಗಿಯ ಗುಣಮಟ್ಟದ ಬಗ್ಗೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೊಟ್ಟಿಗೆಹಾರ ಸೊಸೈಟಿಗೆ ಈ ಬಾರಿ ಬಂದಿರುವ ರಾಗಿಯಲ್ಲಿ ಹೆಚ್ಚಿನ ಪ್ರಮಾಣದ ಧೂಳು ಕಂಡುಬಂದಿದ್ದು, ಗುಣಮಟ್ಟ ಕಳಪೆಯಾಗಿದೆ ಎಂಬ ಆರೋಪ ಕೇಳಿಬಂದಿದೆ. ರಾಗಿ ಪಡೆಯಲು ಬಂದಿದ್ದ ಕೆಲ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿ, ಪಡಿತರವನ್ನು ಪಡೆಯದೆ ವಾಪಸ್ ತೆರಳಿದ್ದಾರೆ.

ಬಡ ಕುಟುಂಬಗಳಿಗೆ ವಿತರಿಸುವ ಪಡಿತರ ಧಾನ್ಯಗಳು ಉತ್ತಮ ಗುಣಮಟ್ಟದಿಂದ ಕೂಡಿರಬೇಕು. ಆದರೆ ಕೊಟ್ಟಿಗೆಹಾರದಲ್ಲಿ ಪೂರೈಕೆಯಾಗಿರುವ ರಾಗಿಯ ಗುಣಮಟ್ಟದ ಬಗ್ಗೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದು, ಮಲೆನಾಡು ಭಾಗಕ್ಕೆ ಉತ್ತಮ ಗುಣಮಟ್ಟದ ಆಹಾರ ಧಾನ್ಯಗಳನ್ನು ಪೂರೈಸುವಂತೆ ಸರಕಾರವನ್ನು ಒತ್ತಾಯಿಸಿದ್ದಾರೆ.

ಗ್ರಾಮಸ್ಥರ ದೂರಿನ ಹಿನ್ನೆಲೆಯಲ್ಲಿ ಬಣಕಲ್ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಎಸ್. ನಾರಾಯಣಗೌಡ, ಮುಖ್ಯ ನಿರ್ವಹಣಾಧಿಕಾರಿ ನಿಶಾಂತ್ ಹಾಗೂ ನಿರ್ದೇಶಕರಾದ ಟಿ.ಎಂ. ಗಜೇಂದ್ರ ಗೌಡ, ಬಿ.ಎಂ. ಭರತ್, ಬಿ.ಎಸ್. ವಿಕ್ರಂ ಗೌಡ, ಎ.ಬಿ. ನಾಗೇಶ್ ಗೌಡ, ಬಿ.ಬಿ. ಶರತ್ ಸೇರಿದಂತೆ ಇತರರು ಕೊಟ್ಟಿಗೆಹಾರ ಸೊಸೈಟಿಗೆ ಭೇಟಿ ನೀಡಿದರು.

ಈ ವೇಳೆ ಮೂಡಿಗೆರೆ ಆಹಾರ ನಿರೀಕ್ಷಕ ಇಂದ್ರೇಶ್ ಅವರನ್ನು ಸ್ಥಳಕ್ಕೆ ಕರೆಸಿ, ಪೂರೈಕೆಯಾಗಿರುವ ರಾಗಿಯ ಗುಣಮಟ್ಟ ಪರಿಶೀಲಿಸುವಂತೆ ಮನವಿ ಮಾಡಿದರು. ಪಡಿತರ ಪಡೆಯಲು ಆಗಮಿಸಿದ್ದ ಗ್ರಾಮಸ್ಥರೂ ತಮ್ಮ ಅಸಮಾಧಾನವನ್ನು ಅಧಿಕಾರಿಗಳ ಗಮನಕ್ಕೆ ತಂದರು.

ರಾಗಿಯ ಗುಣಮಟ್ಟದ ಸಮಸ್ಯೆಯನ್ನು ಸರಕಾರದ ಗಮನಕ್ಕೆ ತಂದು, ಮುಂದಿನ ದಿನಗಳಲ್ಲಿ ಉತ್ತಮ ಗುಣಮಟ್ಟದ ರಾಗಿ ಪೂರೈಕೆಯಾಗುವಂತೆ ಕ್ರಮ ಕೈಗೊಳ್ಳಲು ಪ್ರಯತ್ನಿಸಲಾಗುವುದು ಎಂದು ಆಹಾರ ನಿರೀಕ್ಷಕರು ಭರವಸೆ ನೀಡಿದರು.

ಮಲೆನಾಡಿಗೆ ಅಕ್ಕಿ ನೀಡಲು ಆಗ್ರಹ
ಮಲೆನಾಡು ಭಾಗದ ಅನೇಕ ಕುಟುಂಬಗಳು ರಾಗಿಗಿಂತ ಅಕ್ಕಿಯನ್ನೇ ತಮ್ಮ ದೈನಂದಿನ ಆಹಾರದಲ್ಲಿ ಹೆಚ್ಚಾಗಿ ಬಳಸುತ್ತವೆ. ಉತ್ತಮ ಗುಣಮಟ್ಟದ ರಾಗಿ ಪೂರೈಕೆಯಾದರೆ ಸ್ವೀಕರಿಸಲು ಯಾವುದೇ ಅಭ್ಯಂತರವಿಲ್ಲ. ಆದರೆ ಧೂಳು ತುಂಬಿದ ಹಾಗೂ ಗುಣಮಟ್ಟದ ಬಗ್ಗೆ ಆಕ್ಷೇಪವಿರುವ ರಾಗಿಯನ್ನು ವಿತರಿಸುವ ಬದಲು, ಇಲ್ಲಿನ ಜನರ ಆಹಾರ ಪದ್ಧತಿಗೆ ಅನುಗುಣವಾಗಿ ಅಕ್ಕಿ ವಿತರಿಸಬೇಕು ಎಂದು ರಾಮನಗರ ಕಿರಣ್ ಸೇರಿದಂತೆ ತರುವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಸರಕಾರ ಬಡ ಕುಟುಂಬಗಳಿಗೆ ವಿತರಿಸುವ ಪಡಿತರ ಧಾನ್ಯಗಳ ಗುಣಮಟ್ಟದ ಬಗ್ಗೆ ಹೆಚ್ಚಿನ ಗಮನಹರಿಸಬೇಕು. ಕೊಟ್ಟಿಗೆಹಾರದಲ್ಲಿ ಕಂಡುಬಂದಿರುವ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಮುಂದಿನ ದಿನಗಳಲ್ಲಿ ಗುಣಮಟ್ಟದ ಆಹಾರ ಧಾನ್ಯಗಳು ಪೂರೈಕೆಯಾಗುವಂತೆ ಕ್ರಮ ಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ. (ವರದಿ- ತನು ಕೊಟ್ಟಿಗೆಹಾರ)

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.