ಭದ್ರಾವತಿ: (ನ್ಯೂಸ್ ಮಲ್ನಾಡ್ ವರದಿ) ತಾಲೂಕಿನಾದ್ಯಂತ ಭಾನುವಾರ ಸಂಜೆ ಸುರಿದ ಸಿಡಿಲು-ಗುಡುಗು ಸಹಿತ ಭಾರಿ ಮಳೆ ಭೀಕರ ಅನಾಹುತ ಸೃಷ್ಟಿಸಿದೆ.
ತಾಲೂಕಿನ ಸಿರಿಯೂರು ಗ್ರಾಮದ ಬಳಿ ಸಿಡಿಲು ಬಡಿದ ಪರಿಣಾಮ ಒಟ್ಟು 53 ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಮೂಲದ ನರಸಿಂಹಮೂರ್ತಿ ಎಂಬುವವರು ತಮ್ಮ ಸುಮಾರು 400 ಕುರಿಗಳ ಹಿಂಡನ್ನು ಮೇಯಿಸಿಕೊಂಡು ಭದ್ರಾವತಿ ತಾಲೂಕಿನ ಸಿರಿಯೂರು ಗ್ರಾಮದ ಬಳಿ ಬಂದಿದ್ದರು. ಭಾನುವಾರ ರಾತ್ರಿ ಸಿರಿಯೂರಿನ ರವಿಕುಮಾರ್ ಎಂಬುವವರ ತೋಟದಲ್ಲಿ ಕುರಿಗಳನ್ನು ಬಿಟ್ಟು ವಾಸ್ತವ್ಯ ಹೂಡಿದ್ದರು. ಆದರೆ, ಸಂಜೆ ಸುಮಾರು 7 ಗಂಟೆಯ ವೇಳೆಗೆ ಇದ್ದಕ್ಕಿದ್ದಂತೆ ಆಕಾಶದಿಂದ ಪ್ರಕೃತಿಯ ಮುನಿಸಿನಂತೆ ಎರಗಿದ ಭೀಕರ ಸಿಡಿಲು ಕುರಿಮಂದೆಯ ಮೇಲೆ ಬಿದ್ದಿದೆ.

ಸಿಡಿಲಿನ ತೀವ್ರತೆಗೆ ನರಸಿಂಹಮೂರ್ತಿ ಅವರಿಗೆ ಸೇರಿದ 53 ಕುರಿಗಳು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿವೆ. ಕಣ್ಣೆದುರೇ ಮೂಕ ಜೀವಿಗಳು ಮೃತಪಟ್ಟಿರುವುದನ್ನು ಕಂಡು ಕುರಿಗಾಹಿ ನರಸಿಂಹಮೂರ್ತಿ ಕಣ್ಣೀರು ಹಾಕಿದ್ದಾರೆ. ಘಟನೆಯಿಂದಾಗಿ ಸುಮಾರು 10 ಲಕ್ಷ ರೂಪಾಯಿಗಳಿಗೂ ಅಧಿಕ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಅನಾಹುತದ ಮಾಹಿತಿ ತಿಳಿಯುತ್ತಿದ್ದಂತೆ ತಹಶೀಲ್ದಾರ್ ನೇತೃತ್ವದಲ್ಲಿ ಕಂದಾಯಾಧಿಕಾರಿಗಳು ಹಾಗೂ ಗ್ರಾಮ ಲೆಕ್ಕಿಗರ (ವಿಎ) ತಂಡ ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತ ಕುರಿಗಾಹಿಗೆ ಸಾಂತ್ವನ ಹೇಳಿತು. ಇದೇ ವೇಳೆ ಪಶುವೈದ್ಯಾಧಿಕಾರಿಗಳು ಹಾಗೂ ಅವರ ಸಿಬ್ಬಂದಿ ವರ್ಗದವರು ಸ್ಥಳದಲ್ಲೇ ಮೃತಪಟ್ಟ 53 ಕುರಿಗಳ ಮರಣೋತ್ತರ ಪರೀಕ್ಷೆ ನಡೆಸಿದರು.
ಸರ್ಕಾರಕ್ಕೆ ವರದಿ ರವಾನೆ
ಬಡ ಕುರಿಗಾಹಿಗೆ ಸಂಭವಿಸಿದ ಈ ಭಾರಿ ನಷ್ಟದ ಕುರಿತು ಕಂದಾಯ ಇಲಾಖೆಯು ಸಂಪೂರ್ಣ ವಿವರಗಳನ್ನು ಒಳಗೊಂಡ ವರದಿಯನ್ನು ಸಿದ್ಧಪಡಿಸಿದ್ದು, ಸರ್ಕಾರದಿಂದ ಸೂಕ್ತ ಪರಿಹಾರ ಧನ ಕೊಡಿಸುವ ನಿಟ್ಟಿನಲ್ಲಿ ಉನ್ನತ ಅಧಿಕಾರಿಗಳಿಗೆ ವರದಿಯನ್ನು ರವಾನಿಸಿದೆ.
















