
ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಶ್ರೀಭಾರತೀತೀರ್ಥ ಶಾಸ್ತ್ರ ಸಮುತ್ಕರ್ಷ ಕೇಂದ್ರ, ಮೆಣಸೆಯಲ್ಲಿ ನಡೆದ ಶ್ರೀಶಂಕರ ಜಯಂತಿ ಮಹೋತ್ಸವದಲ್ಲಿ ಶ್ರೀಶಂಕರಾಚಾರ್ಯರು ಪ್ರತಿಪಾದಿಸಿದ ತತ್ತ್ವಗಳನ್ನು ಅನುಸರಿಸುವುದರಿಂದ ಮಾನವ ಜೀವನದಲ್ಲಿ ಶ್ರೇಯಸ್ಸು ದೊರೆಯುತ್ತದೆ ಎಂದು ಕೇಂದ್ರದ ಸಹ ನಿರ್ದೇಶಕರಾದ ಪ್ರೊ. ನವೀನ ಹೊಳ್ಳ ಹೇಳಿದರು.
ವಿಶಿಷ್ಟ ಉಪನ್ಯಾಸಕಾರರಾಗಿ ಮಾತನಾಡಿದ ಅವರು, ಶ್ರೀಶಂಕರಾಚಾರ್ಯರು ಸಾಕ್ಷಾತ್ ಶಿವನ ಅವತಾರಸ್ವರೂಪಿಗಳಾಗಿದ್ದು, ಅಲ್ಪವಯಸ್ಸಿನಲ್ಲಿಯೇ ಪ್ರಸ್ಥಾನತ್ರಯ ಭಾಷ್ಯಗಳನ್ನು ರಚಿಸಿ ಸನಾತನ ಧರ್ಮವನ್ನು ಪುನಃ ಪ್ರತಿಷ್ಠಾಪಿಸಿದರು ಎಂದರು. ಅವರು ಅವತಾರ ಪಡೆದ ಕಾಲದಲ್ಲಿ ವ್ಯಾಪಕವಾಗಿದ್ದ ನಾಸ್ತಿಕವಾದವನ್ನು ತಿರಸ್ಕರಿಸಿದಷ್ಟೇ ಅಲ್ಲದೆ, ಆಸ್ತಿಕರ ನಡುವಿನ ಭಿನ್ನಾಭಿಪ್ರಾಯಗಳನ್ನು ಸಮನ್ವಯದ ಮೂಲಕ ನಿವಾರಿಸಿದರು ಎಂದು ವಿವರಿಸಿದರು.

ಶ್ರೀಶಂಕರಭಗವತ್ಪಾದರು ಬಾಲ್ಯದಲ್ಲಿಯೇ ವೈರಾಗ್ಯವನ್ನು ಅಳವಡಿಸಿಕೊಂಡು, ನರ್ಮದಾ ನದಿತೀರದಲ್ಲಿ ಶ್ರೀ ಗೋವಿಂದ ಭಗವತ್ಪಾದರಿಂದ ದೀಕ್ಷೆ ಪಡೆದು, ಶಾಸ್ತ್ರಗಳ ಸಾರವನ್ನು ತಮ್ಮ ಭಾಷ್ಯಗಳ ಮೂಲಕ ಪ್ರತಿಪಾದಿಸಿದರು. ಅವರ ಜೀವನ ಮತ್ತು ಕೃತಿಗಳು ಎಲ್ಲ ವಿವೇಕಿಗಳಿಗೆ ಆದರ್ಶವಾಗಿದ್ದು, ಅವರು ಬೋಧಿಸಿದ ತತ್ತ್ವಗಳನ್ನು ಅನುಸರಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೇಂದ್ರದ ನಿರ್ದೇಶಕರಾದ ಪ್ರೊ. ಸುಬ್ರಾಯ ವಿ. ಭಟ್ ಮಾತನಾಡಿ, ಶ್ರೀಶಂಕರಾಚಾರ್ಯರು ಶ್ರುತಿ, ಸ್ಮೃತಿ ಮತ್ತು ನ್ಯಾಯಾಧಾರಗಳಿಂದ ನಾಸ್ತಿಕವಾದವನ್ನು ಖಂಡಿಸಿ, ಏಕಾತ್ಮವಾದವನ್ನು ಪ್ರತಿಪಾದಿಸಿದರು. ಜೀವ-ಬ್ರಹ್ಮ ಮತ್ತು ಜೀವ-ಜೀವರ ನಡುವೆ ಯಾವುದೇ ಭೇದವಿಲ್ಲ ಎಂಬ ಅವರ ತತ್ತ್ವವು ಸಮಾಜದಲ್ಲಿ ಸಮಾನತೆ ಮತ್ತು ಏಕತೆಯನ್ನು ಬೆಳೆಸುತ್ತದೆ ಎಂದು ಹೇಳಿದರು.
ಮಹೋತ್ಸವದ ಅಂಗವಾಗಿ ಶ್ರೀಶಂಕರಾಚಾರ್ಯರ ಪೂಜೆ, ಅವರ ಕೃತಿಗಳ ಪಾರಾಯಣ, ಸ್ತೋತ್ರಗಾನ ಹಾಗೂ ಉಪನ್ಯಾಸ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮವನ್ನು ಅತವೇದಾಂತ ವಿಭಾಗದ ವಿದ್ವಾನ್ ನಚಿಕೇತ ಭಟ್ ನಿರ್ವಹಿಸಿದರು. ಡಾ. ನಿರಂಜನ ಭಟ್ ಧನ್ಯವಾದ ಅರ್ಪಿಸಿದರು. ಕಾಲೇಜಿನ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.













