
ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ನಕಲಿ ದಾಖಲೆ ಸೃಷ್ಟಿಸಿ ಜಮೀನು ಮಂಜೂರು ಮಾಡಿದ್ದ ಪ್ರಕರಣದಲ್ಲಿ ಮೃತ ನಿವೃತ್ತ ತಹಶೀಲ್ದಾರ್ ಸೇರಿದಂತೆ 6 ಜನರ ವಿರುದ್ಧ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
2018-19ರಲ್ಲಿ ಗೋಣಿಬೀಡು ಹೋಬಳಿಯ ದೇವವೃಂದ ಗ್ರಾಮದ ಸರ್ವೆ ನಂ. 313ರ ಎಚ್.4, ಎಚ್.5ರಲ್ಲಿ 9 ಎಕರೆ ಸರ್ಕಾರಿ ಜಮೀನನ್ನು ಬೇರೆ ಕಡತದ ಸಾಗುವಳಿ ಚೀಟಿ ಅಪ್‌ಲೋಡ್ ಮಾಡಿ, ಅಕ್ರಮವಾಗಿ ಬೇರೆಯವರಿಗೆ ನೇರವಾಗಿ ಖಾತೆ ಮಾಡಲಾಗಿದೆ. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮೂಡಿಗೆರೆ ತಹಶೀಲ್ದಾರ್ ಎಸ್.ಆಶ್ವಿನಿ ದೂರು ನೀಡಿದ್ದರು.

ಪ್ರಕರಣದಲ್ಲಿ ಭಾಗಿಯಾಗಿದ್ದ ತಹಶೀಲ್ದಾರ್ ಸಿ.ಚಿನ್ನರಾಜು ಮೃತಪಟ್ಟಿದ್ದಾರೆ. ಅವರೊಂದಿಗೆ ನಿವೃತ್ತ ತಹಶೀಲ್ದಾರ್ ಪದ್ಮನಾಭ್ ಶಾಸ್ತ್ರಿ, ನಿವೃತ್ತ ರಾಜಸ್ವ ನಿರೀಕ್ಷಕ ಗಿಲ್ಬರ್ಟ್ ಪಾಯ್ಸ್ ಹಾಗೂ ಅಂದಿನ ಗ್ರಾಮ ಲೆಕ್ಕಾಧಿಕಾರಿ ಎಸ್.ಎನ್. ಕೃಷ್ಣಕುಮಾರ್, ಖಾತೆದಾರರಾದ ನಿಕೇಶ್ ಪಿರೇರಾ, ಅನಿಷ್ ನಿಕೇಶ್ ಪಿರೇರಾ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಎಸ್.ಎನ್. ಕೃಷ್ಣಕುಮಾರ್ ಈಗಾಗಲೇ ಪ್ರಕರಣವೊಂದರಲ್ಲಿ ಸೇವೆಯಿಂದ ವಜಾಗೊಂಡಿದ್ದಾರೆ. ಖಾತೆದಾರ ಹೊರತುಪಡಿಸಿ, ಆರೋಪಿತ ಎಲ್ಲ ಅಧಿಕಾರಿಗಳು ನಿವೃತ್ತರಾಗಿದ್ದಾರೆ. (ವರದಿ- ತನು ಕೊಟ್ಟಿಗೆಹಾರ)














