
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ವೀಸಾ ಒದಗಿಸಲು ವಿಫಲವಾದ ಪ್ರಯಾಣ ಸೇವೆಗಳ ಪ್ರತಿನಿಧಿ ಸಂಸ್ಥೆಯು (ಟ್ರಾವೆಲ್ ಏಜೆನ್ಸಿ) ಹಣ ಹಿಂದಿರುಗಿಸಬೇಕು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶ ನೀಡಿದೆ.
ಚಿಕ್ಕಮಗಳೂರಿನ ಆವತಿಯ ಎ.ಪಿ. ರಾಜಾರಾಮ್ ಅವರು ಕುಟುಂಬದೊಂದಿಗೆ ಜಪಾನ್ ಪ್ರವಾಸ ಕೈಗೊಳ್ಳಲು ವೀಸಾ, ಟಿಕೆಟ್ ಮಾಡುವಂತೆ ಬೆಂಗಳೂರಿನ ಬಸವನಗುಡಿಯ ಏಜೆನ್ಸಿಗೆ ₹2,34,500 ನೀಡಿದ್ದರು. ಆದರೆ, ವೀಸಾ ಒದಗಿಸಲು ಏಜೆನ್ಸಿ ವಿಫಲವಾಯಿತು. ಆದರೆ, ₹1,52,500 ಮಾತ್ರ ಹಿಂದಿರುಗಿಸಿದ್ದು, ಬಾಕಿ ₹82 ಸಾವಿರ ಪಾವತಿಸದೆ ಸೇವಾ ನ್ಯೂನತೆ ಎಸಗಿದೆ ಎಂದು ಆಯೋಗ ಅಭಿಪ್ರಾಯಪಟ್ಟಿದೆ.

₹82 ಸಾವಿರಕ್ಕೆ ವಾರ್ಷಿಕ ಶೇ 9ರಷ್ಟು ಬಡ್ಡಿ ಸಹಿತ ದೂರುದಾರರಿಗೆ ನೀಡಬೇಕು. ಪರಿಹಾರವಾಗಿ ₹10 ಸಾವಿರ, ಖರ್ಚು-ವೆಚ್ಚ ₹5 ಸಾವಿರ ನೀಡಬೇಕು ಎಂದು ಆದೇಶಿಸಿದೆ. ಆಯೋಗದ ಅಧ್ಯಕ್ಷ ಎನ್.ಆರ್. ಚೆನ್ನಕೇಶವ, ಸದಸ್ಯರಾದ ಈ.ಪ್ರೇಮಾ, ಮಂಜುನಾಥ ಎಂ. ಬಮ್ಮನಕಟ್ಟಿ ಆದೇಶ ನೀಡಿದ್ದಾರೆ. ದೂರುದಾರರ ಪರವಾಗಿ ವಕೀಲ ಜಿ.ಆರ್. ಶ್ರವಣ್ ವಾದ ಮಂಡಿಸಿದ್ದರು.














