
ಶೃಂಗೇರಿ–ಕೊಪ್ಪ ಭಾಗದ ಯಕ್ಷಗಾನ ಹಾಗೂ ತಾಳಮದ್ದಳೆ ಕಲಾಭಿಮಾನಿಗಳಿಗೆ ಮತ್ತೆೊಂದು ಸುವರ್ಣ ಅವಕಾಶ ಒದಗಿದೆ. ಅರ್ಥಪೂರ್ಣ ಪ್ರಸಂಗಗಳು ಮತ್ತು ಖ್ಯಾತ ಕಲಾವಿದರ ಸಮನ್ವಯದ ಮೂಲಕ ವಿಶಿಷ್ಟ ಕಾರ್ಯಕ್ರಮಗಳನ್ನು ನೀಡುವಲ್ಲಿ ಹೆಸರಾಗಿರುವ “ಕಿರಣಕೆರೆ ಪ್ರತಿಷ್ಠಾನ”ವು ಈ ವರ್ಷವೂ ತನ್ನ ಬಹು ನಿರೀಕ್ಷಿತ “ತಾಳಮದ್ದಳೆ ಸಪ್ತಾಹ”ವನ್ನು ಅದ್ಧೂರಿಯಾಗಿ ಆಯೋಜಿಸಿದೆ.
ಮಲೆನಾಡಿನ ಹೆಮ್ಮೆಯ ಕಲಾಶ್ರೀ ಪ್ರೊ. ಶ್ರೀ ಪವನ್ ಕಿರಣಕೆರೆ ಅವರ ನೇತೃತ್ವದಲ್ಲಿ ಏಪ್ರಿಲ್ 27ರಿಂದ ಮೇ 3ರವರೆಗೆ ಶೃಂಗೇರಿ–ಕೊಪ್ಪ ತಾಲೂಕಿನ ವಿವಿಧ ಸ್ಥಳಗಳಲ್ಲಿ ಈ ಸಪ್ತಾಹ ನಡೆಯಲಿದೆ. ಯಕ್ಷಗಾನದ ಸುಮಧುರ ಭಾಗವತಿಕೆ, ಮನಮೋಹಕ ಹಿಮ್ಮೇಳ ಹಾಗೂ ರಸಮಯ ಅರ್ಥಗಾರಿಕೆಯೊಂದಿಗೆ ಮಲೆನಾಡು ಮತ್ತು ಕರಾವಳಿ ಭಾಗದ ಪ್ರತಿಭಾವಂತ ಕಲಾವಿದರು ಕಲಾಭಿಮಾನಿಗಳನ್ನು ರಂಜಿಸಲು ಸಜ್ಜಾಗಿದ್ದಾರೆ.

ಕಾರ್ಯಕ್ರಮಗಳ ಸರಣಿಯಲ್ಲಿ ಪ್ರತಿದಿನವೂ ವಿಭಿನ್ನ ಪೌರಾಣಿಕ ಪ್ರಸಂಗಗಳು ಪ್ರದರ್ಶನಗೊಳ್ಳಲಿದ್ದು, ಏಪ್ರಿಲ್ 27ರಂದು ಮಾನಗಾರುದಲ್ಲಿ “ಅಂಬೆ” ಪ್ರಸಂಗ, ಏಪ್ರಿಲ್ 28ರಂದು ವೈಕುಂಠಪುರದಲ್ಲಿ “ದ್ರೌಪದಿ”, ಏಪ್ರಿಲ್ 29ರಂದು ಕಲ್ಲುಗುಡ್ಡೆಯಲ್ಲಿ “ಕೈಕೇಯಿ”, ಏಪ್ರಿಲ್ 30ರಂದು ಕೊಪ್ಪದಲ್ಲಿ “ಜ್ವಾಲೆ”, ಮೇ 1ರಂದು ನೆಮ್ಮಾರಿನಲ್ಲಿ “ದಾಕ್ಷಯಿಣಿ”, ಮೇ 2ರಂದು ಸೂರಳಿಯಲ್ಲಿ “ಸೀತೆ” ಹಾಗೂ ಮೇ 3ರಂದು ಬೆಳಂದೂರಿನಲ್ಲಿ “ದೇವಯಾನಿ” ಪ್ರಸಂಗಗಳು ನಡೆಯಲಿವೆ.

ಎಲ್ಲಾ ದಿನಗಳ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಅಭಿಮಾನಿಗಳು ಹಾಗೂ ಸ್ಥಳೀಯರನ್ನು ಸಂಘಟನಾ ಸಂಚಾಲಕರಾದ “ಶ್ರೀ ಪ್ರವರ ಇವೆಂಟ್ಸ್” ಸಂಸ್ಥೆಯ ವ್ಯವಸ್ಥಾಪಕಿ ಶ್ರೀಮತಿ ಶುಭಶ್ರೀ ಹರ್ಷ ಸೂರಳಿ ಆತ್ಮೀಯವಾಗಿ ಆಹ್ವಾನಿಸಿದ್ದಾರೆ.
ಯಕ್ಷಗಾನ ಮತ್ತು ತಾಳಮದ್ದಳೆ ಪ್ರೇಮಿಗಳಿಗೆ ಈ ಸಪ್ತಾಹವು ಒಂದು ಸ್ಮರಣೀಯ ಸಾಂಸ್ಕೃತಿಕ ಹಬ್ಬವಾಗಲಿದ್ದು, ಮಲೆನಾಡಿನ ಸಾಂಸ್ಕೃತಿಕ ವೈಭವವನ್ನು ಮತ್ತೊಮ್ಮೆ ಪ್ರಖ್ಯಾತಿಗೊಳಿಸುವ ನಿರೀಕ್ಷೆ ವ್ಯಕ್ತವಾಗಿದೆ.













