ಹಾಸನ: (ನ್ಯೂಸ್ ಮಲ್ನಾಡ್ ವರದಿ) ತಾಲ್ಲೂಕಿನ ದೊಡ್ಡಹೊನ್ನೇನಹಳ್ಳಿಯಲ್ಲಿ ಶನಿವಾರ ನಡೆದಿದ್ದ ₹69.56 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ನಗದು ಕಳವು ಪ್ರಕರಣವನ್ನು ಹಾಸನ ಗ್ರಾಮಾಂತರ ಪೊಲೀಸರು ಕೆಲವೇ ಗಂಟೆಗಳಲ್ಲಿ ಭೇದಿಸಿದ್ದಾರೆ. ಪ್ರಕರಣದಲ್ಲಿ ಮನೆಯ ಸೊಸೆಯೇ ತನ್ನ ಪರಿಚಯಸ್ಥನೊಂದಿಗೆ ಸೇರಿ ಕಳ್ಳತನ ನಡೆಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಪೊಲೀಸರ ಮಾಹಿತಿ ಪ್ರಕಾರ, ಶನಿವಾರ ಕೇಶವೇಗೌಡ, ಅವರ ಪತ್ನಿ ಜಯಲಕ್ಷ್ಮಿ ಹಾಗೂ ಪುತ್ರ ವೇಣುಗೋಪಾಲ್ ಜಮೀನಿನಲ್ಲಿ ಕೆಲಸಕ್ಕೆ ತೆರಳಿದ್ದರು. ಇದೇ ವೇಳೆ ಮಗುವನ್ನು ಶಾಲಾ ಬಸ್ಗೆ ಹತ್ತಿಸಿ ಮನೆಗೆ ಬಂದಿದ್ದ ಸೊಸೆ ಅಮೃತಾ ಮನೆಯಲ್ಲೇ ಇದ್ದಳು. ಈ ಸಮಯದಲ್ಲಿ ತನ್ನ ಪರಿಚಯಸ್ಥ ಪರಮೇಶ್ ಅಲಿಯಾಸ್ ಚೇತನ್ ಎಂಬಾತನನ್ನು ಮನೆಗೆ ಕರೆಸಿಕೊಂಡು, ಬೀರುವಿನಲ್ಲಿದ್ದ ಚಿನ್ನಾಭರಣ ಮತ್ತು ನಗದನ್ನು ತೆಗೆದು ಅವನಿಗೆ ನೀಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ನಂತರ ಮನೆಯ ಮುಂಭಾಗಿಲಿಗೆ ಬೀಗ ಹಾಕದೇ, ಕೊಟ್ಟಿಗೆಗೆ ಮಾತ್ರ ಬೀಗ ಹಾಕಿ ತಾನೂ ಜಮೀನಿನತ್ತ ತೆರಳಿದ್ದಳು ಎನ್ನಲಾಗಿದೆ.

ಸಂಜೆ ಮನೆಗೆ ಮರಳಿದ ಕೇಶವೇಗೌಡ ಅವರು ಬೀರುವಿನಲ್ಲಿದ್ದ ಚಿನ್ನಾಭರಣ ಮತ್ತು ನಗದು ಕಾಣೆಯಾಗಿರುವುದನ್ನು ಗಮನಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ವೇಳೆ ಅಮೃತಾ ಕೂಡ ಕಳ್ಳತನ ನಡೆದಿರುವಂತೆ ವರ್ತಿಸಿ ಅನುಮಾನವನ್ನು ಬೇರೆಡೆಗೆ ತಿರುಗಿಸಲು ಯತ್ನಿಸಿದ್ದಾಳೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಪ್ರಕರಣ ದಾಖಲಿಸಿಕೊಂಡ ಹಾಸನ ಗ್ರಾಮಾಂತರ ಠಾಣೆ ಪೊಲೀಸರು ತ್ವರಿತ ತನಿಖೆ ನಡೆಸಿ ಅಮೃತಾ ಹಾಗೂ ಪರಮೇಶ್ ಅಲಿಯಾಸ್ ಚೇತನ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇಬ್ಬರಿಗೂ ಹಲವು ವರ್ಷಗಳಿಂದ ಪರಿಚಯವಿದ್ದು, ಕಳ್ಳತನವನ್ನು ಪೂರ್ವಯೋಜಿತವಾಗಿ ನಡೆಸಿರುವ ಶಂಕೆ ವ್ಯಕ್ತವಾಗಿದೆ.
ಪ್ರಕರಣ ಸಂಬಂಧ ಹಾಸನ ಗ್ರಾಮಾಂತರ ಠಾಣೆಯಲ್ಲಿ ಹೆಚ್ಚಿನ ತನಿಖೆ ಮುಂದುವರಿದಿದೆ.
















