ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ತಾಲ್ಲೂಕಿನ ನೆಮ್ಮಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬುಕ್ಕಡಿಬೈಲ್ ನಿವಾಸಿ ಲಿಂಗಪ್ಪ ಗೌಡ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಟಿಪ್ಪರ್ ಲಾರಿಗೆ, ಬುಕ್ಕಡಿಬೈಲ್ ರಸ್ತೆಯಿಂದ ಶೃಂಗೇರಿಗೆ ಬರುತ್ತಿದ್ದ ಬೈಕ್ ನಡುವೆ ಅಪಘಾತ ಸಂಭವಿಸಿದೆ. ಡಿಕ್ಕಿಯ ಪರಿಣಾಮ ಬೈಕ್ ಲಾರಿಯ ಚಕ್ರದಡಿ ಸಿಲುಕಿದ್ದು, ಸವಾರ ಲಿಂಗಪ್ಪ ಗೌಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಸ್ಥಳೀಯರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅವೈಜ್ಞಾನಿಕವಾಗಿ ನಡೆದಿರುವುದೇ ಅಪಘಾತಕ್ಕೆ ಕಾರಣ ಎಂದು ಆರೋಪಿಸಿದ್ದಾರೆ. ಗ್ರಾಮೀಣ ರಸ್ತೆಯಿಂದ ಹೆದ್ದಾರಿಗೆ ಸೇರುವ ಸ್ಥಳದಲ್ಲಿ ಹಂಪ್ ಅಳವಡಿಸಿಲ್ಲ, ಸೂಚನಾ ಫಲಕಗಳೂ ಇಲ್ಲ ಎಂದು ದೂರಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭವಾದ ಬಳಿಕ ಈ ರೀತಿಯ ಅಪಘಾತಗಳು ಪದೇಪದೇ ಸಂಭವಿಸುತ್ತಿವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಮೃತ ಲಿಂಗಪ್ಪ ಗೌಡ ಅವರು ಶೃಂಗೇರಿಯ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ವಾಚ್‌ಮನ್ ಆಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.













