ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಕಳೆದೊಂದು ವಾರದಿಂದ ಜನವಸತಿ ಪ್ರದೇಶದಲ್ಲಿ ಸಂಚರಿಸಿ, ಆತಂಕ ಸೃಷ್ಟಿಸಿರುವ ಕಾಡಾನೆ ಶುಕ್ರವಾರ ನರಸೀಪುರ ಗ್ರಾ.ಪಂ. ವ್ಯಾಪ್ತಿಯ ಕುಂಚೂರಿನ ಜಮೀನಿಗೆ ನುಗ್ಗಿ ಅಡಿಕೆ, ಬಾಳೆಗೆ ಹಾನಿ ಮಾಡಿದೆ. ಜೊತೆಗೆ ನಾಟಿ ಮಾಡಲು ಅಗಡಿಯಲ್ಲಿ ಸಿದ್ಧಪಡಿಸಿದ್ದ ಭತ್ತದ ಸಸಿಗಳನ್ನು ತುಳಿದು ಹಾಕಿದೆ.
ಇದನ್ನೂ ಓದಿ: 60% ಅಂಕ ಪಡೆದ ವಿದ್ಯಾರ್ಥಿಗಳಿಗೆ 50,000 ಸ್ಕಾಲರ್ ಶಿಪ್

ಕಳಸಾಪುರ, ಜಾರ್ಗಲ್, ಅಂದಗಾರು ಭಾಗದಲ್ಲಿ ಕಾಣಿಸಿಕೊಂಡಿದ್ದ ಕಾಡಾನೆ ಕ್ರಮೇಣ ಪಟ್ಟಣಕ್ಕೆ ಹತ್ತಿರದಲ್ಲಿ ಎನ್.ಕೆ.ರಸ್ತೆ ಬಳಿ ಬಂದು ಕುಂಚೂರು ಘಾಟಿ ಇಳಿದು ತೋಟ-ಗದ್ದೆಯಲ್ಲಿ ಓಡಾಡಿ ಬೆಳೆ ಹಾನಿ ಮಾಡಿತ್ತು. ಗುಡ್ಡ ಪ್ರದೇಶ ಹತ್ತಲಾಗದೆ ಹಾದಿ ಬದಲಾಯಿಸಿ ಮತ್ತೆ ಘಾಟಿ ಪ್ರದೇಶ ಏರಿ, ಶನಿವಾರ ಬೆಳಿಗ್ಗೆ ಮರಿತೊಟ್ಟಿಲು ಭಾಗಕ್ಕೆ ಬಂದು ಅಲ್ಲಿಂದ ವಾಪಸ್ ಹೆಜ್ಜೆ ಹಾಕಿದೆ ಎನ್ನಲಾಗಿದೆ.
ಇನ್ನು ಕಾಡಾನೆ ತುಳಿತಕ್ಕೆ ನಿನ್ನೆ ಮತ್ತೋರ್ವ ರೈತ ಬಲಿಯಾಗಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಹುಯಿಗೆರೆ ಗ್ರಾಪಂ ಅಂಡವಾನೆ ಗ್ರಾಮದ ಸುಬ್ಬೇಗೌಡ (66) ಎನ್ನುವವರ ಮನೆ ಬಳಿಯಲ್ಲಿ ಭಾನುವಾರ ಸಂಜೆ 7 ಗಂಟೆ ವೇಳೆಗೆ ಕಾಡಾನೆ ಬಂದಿದ್ದು, ಇದನ್ನು ಕಾಡಿನತ್ತ ಓಡಿಸಲು ಆನೆಯ ಹಿಂದೆ ಹೋಗಿದ್ದಾರೆ. ಈ ವೇಳೆ ಆನೆ ಅವರ ತೋಟದ ಐಬೆಕ್ಸ್ ಬೇಲಿಗೆ ತಗುಲಿದ್ದು, ವಿದ್ಯುತ್ ಶಾಕ್ ಹೊಡೆದಾಕ್ಷಣ ಏಕಾಏಕಿ ವಾಪಸ್ ಬಂದು ದಾಳಿ ಮಾಡಿ ತುಳಿದು ಸಾಯಿಸಿದೆ ಎನ್ನಲಾಗಿದೆ.
ಇದನ್ನೂ ಓದಿ: ರಾಜ್ಯದ ರೈತರಿಗೆ ಎಚ್ಚರಿಕೆ; ಪಿಎಂ ಕಿಸಾನ್ ಹಣ 110 ಕೋಟಿ ವಂಚನೆ!
ಕಳೆದ ಬುಧವಾರ ರಾತ್ರಿಯಷ್ಟೇ ಬನ್ನೂರು ಗ್ರಾಮದಲ್ಲಿ ಕಾಡಾನೆ ಅನಿತಾ ಎಂಬ ಕೂಲಿ ಕಾರ್ಮಿಕ ಮಹಿಳೆಯನ್ನು ಸಾಯಿಸಿತ್ತು. ಮಹಿಳೆ ಮೃತಪಟ್ಟ ಬಳಿಕ ಬಾಳೆಹೊನ್ನೂರು ಅರಣ್ಯ ಇಲಾಖೆ ಮುಂಭಾಗದಲ್ಲಿ ಸಾವಿರಾರು ರೈತರು, ಸಾರ್ವಜನಿಕರು ಬೃಹತ್ ಪ್ರತಿ ಭಟನೆ ನಡೆಸಿ ಕಾಡಾನೆಯನ್ನು ಸ್ಥಳಾಂತರ ಮಾಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು. ಐದು ದಿನಗಳ ಅಂತರದಲ್ಲಿ ಕಾಡಾನೆ ತುಳಿತಕ್ಕೆ ಮತ್ತೋರ್ವ ಬಲಿಯಾಗಿ ರುವುದಕ್ಕೆ ಗ್ರಾಮಸ್ಥರು, ರೈತರು ತೀವ್ರ ಆಕ್ರೋಶಗೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಇಂದು ಚಿಕ್ಕಮಗಳೂರು-ಶೃಂಗೇರಿ ರಾಜ್ಯ ಹೆದ್ದಾರಿ ತಡೆದು ಸರ್ವ ಪಕ್ಷಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ.












