ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರತ್ಯೇಕ ಕಾಫಿ ಕಳ್ಳತನ ಪ್ರಕರಣಗಳನ್ನು ಗೋಣಿಬೀಡು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದು, ಸಕಲೇಶಪುರ ಮೂಲದ ಆರು ಮಂದಿಯನ್ನು ಬಂಧಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಸುಮಾರು ₹3.50 ಲಕ್ಷ ಮೌಲ್ಯದ ಕಾಫಿ ಬೀಜಗಳು ಹಾಗೂ ಕಳ್ಳತನಕ್ಕೆ ಬಳಸಿದ್ದ ಸುಮಾರು ₹10 ಲಕ್ಷ ಮೌಲ್ಯದ ಎರಡು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ; ಸೋಲಾರ್ ಪಂಪ್ ಸೆಟ್ಗಳಿಗೆ ಅರ್ಜಿ ಆಹ್ವಾನ

ನಾಗರಾಜು (40), ಕೌಶಿಕ್ (19), ಪ್ರಶಾಂತ್ (23), ಭರತ್ (26), ಸುಶೀಲ್ ಶಂಕರ್ (22), ಮನು ಗೌಡ (25) – ಎಲ್ಲರೂ ಸಕಲೇಶಪುರ ಮೂಲದವರು. ಪ್ರಕರಣದ ಮತ್ತೊಬ್ಬ ಆರೋಪಿ ಗೌತಮ್ ಪರಾರಿಯಾಗಿದ್ದು, ಆತನ ಬಂಧನಕ್ಕಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ಗೋಣಿಬೀಡು ಸಮೀಪದ ಕಸ್ಕೇಬೈಲ್ ಗ್ರಾಮದ ನಿವಾಸಿ ಹಾಗೂ ನಿವೃತ್ತ ವಾಣಿಜ್ಯ ತೆರಿಗೆ ಅಧಿಕಾರಿ ರಂಗಸ್ವಾಮಿ ಅವರ ಕಾಫಿ ಎಸ್ಟೇಟ್ನ ಗೋಡಾನ್ನಲ್ಲಿ ಮೊದಲ ಕಳ್ಳತನ 09-05-2025ರಂದು ನಡೆದಿತ್ತು. ಕಾಫಿ ಸಂಗ್ರಹಿಸಿ 10-05-2025ರಂದು ವಾಪಸ್ ಬಂದಾಗ, ಗೋಡಾನ್ನ ಬೀಗ ಮುರಿದು ₹1.40 ಲಕ್ಷ ಮೌಲ್ಯದ 10 ಮೂಟೆ ಅರೇಬಿಕಾ ಪಾರ್ಚ್ಮೆಂಟ್ ಕಾಫಿ ಕಳವಾಗಿರುವುದು ಬೆಳಕಿಗೆ ಬಂದಿತ್ತು. ಈ ಸಂಬಂಧ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಸರ್ಕಾರ ಆದೇಶ
ಇದೇ ಎಸ್ಟೇಟ್ನಲ್ಲಿ 30-11-2025ರ ರಾತ್ರಿ ಮತ್ತೊಂದು ಕಳ್ಳತನ ನಡೆದಿದ್ದು, ₹2.80 ಲಕ್ಷ ಮೌಲ್ಯದ 18 ಮೂಟೆ ಅರೇಬಿಕಾ ಚೆರಿ ಕಾಫಿ ಕಳವು ಆಗಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.
ತಪಾಸಣೆಯಲ್ಲಿ ತಿಳಿದುಬಂದಂತೆ, ಕೌಶಿಕ್ ರಂಗಸ್ವಾಮಿ ಅವರ ಕಾಫಿ ಎಸ್ಟೇಟ್ನಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದು, ಇತರ ಆರೋಪಿಗಳೊಂದಿಗೆ ಸೇರಿ ಕಳ್ಳತನಕ್ಕೆ ಸಂಚು ರೂಪಿಸಿದ್ದಾನೆ. ಕದ್ದ ಕಾಫಿಯನ್ನು ಸಕಲೇಶಪುರದಲ್ಲಿ ಮಾರಾಟ ಮಾಡಲಾಗಿತ್ತು ಎನ್ನಲಾಗಿದೆ.
ಚಿಕ್ಕಮಗಳೂರು ಉಪವಿಭಾಗದ ಡಿವೈಎಸ್ಪಿ ನಾಗರಾಜ್ ಕೆ.ಆರ್. ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ 50 ಕೆ.ಜಿ ತಲಾ 10 ಚೀಲ ಅರೇಬಿಕಾ ಪಾರ್ಚ್ಮೆಂಟ್ ಕಾಫಿ, 50 ಕೆ.ಜಿ ತಲಾ 5 ಚೀಲ ಅರೇಬಿಕಾ ಚೆರಿ ಕಾಫಿ, ಸುಮಾರು ₹10 ಲಕ್ಷ ಮೌಲ್ಯದ ಎರಡು ಕಾರುಗಳು ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ: ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಯೋಜನೆ ಜಾರಿ
ಈ ಕಾರ್ಯಾಚರಣೆಯಲ್ಲಿ ಮೂಡಿಗೆರೆ ಸರ್ಕಲ್ ಇನ್ಸ್ಪೆಕ್ಟರ್ ರಾಜಶೇಖರ್, ಗೋಣಿಬೀಡು ಪಿಎಸ್ಐ ಹರ್ಷವರ್ಧನ್, ಹೇಮಾ ಹಾಗೂ ಪೊಲೀಸ್ ಸಿಬ್ಬಂದಿಗಳಾದ ರಂಗೇಗೌಡ, ಸುನೀಲ್ ನಾಯ್ಕ್, ಸಚಿನ್ ಮತ್ತು ಮಂಜುನಾಥ್ ಪಾಲ್ಗೊಂಡಿದ್ದರು. ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದ ಪೊಲೀಸ್ ತಂಡಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.
ಇತ್ತೀಚಿನ ದಿನಗಳಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಬೆಳೆಗಾರರು ಸಿಸಿ ಕ್ಯಾಮೆರಾ ಅಳವಡಿಕೆ ಸೇರಿದಂತೆ ಅಗತ್ಯ ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪೊಲೀಸರು ಸಲಹೆ ನೀಡಿದ್ದಾರೆ. (ವರದಿ- ತನು ಕೊಟ್ಟಿಗೆಹಾರ)
ಇದನ್ನೂ ಓದಿ: ರೈಲ್ವೆ ಇಲಾಖೆಯಲ್ಲಿ ಜಾಬ್ ಆಫರ್; 19,000ದಿಂದ ಸಂಬಳ, ಜಸ್ಟ್ ಈ ರೀತಿ ಅರ್ಜಿ ಸಲ್ಲಿಸಿ












