ತಂಗಿ ಮದುವೆ ಹಿನ್ನಲೆ ಆರತಕ್ಷತೆ ಕಾರ್ಯಕ್ರಮಕ್ಕೆಂದು ಹಾಲು-ಮೊಸರು ತರಲು ಹೋದ ಅಣ್ಣ ಬೈಕ್ ಅಪಘಾತದಲ್ಲಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಹಾಸನದಲ್ಲಿ ನಡೆದಿದೆ. ಬೈಕ್ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಪರಿಣಾಮ ಲೋಕೇಶ್ (25) ಮತ್ತು ಆತನ ಸಂಬಂಧಿ ಕಿರಣ್ ಮೃತಪಟ್ಟಿದ್ದಾರೆ. ಘಟನೆಯಿಂದಾಗಿ ಮದುವೆ ಸಂಭ್ರಮದಲ್ಲಿ ಮುಳುಗಿದ್ದ ಮನೆಯಲ್ಲಿ ಸೂತಕದ ಛಾಯೆ ಮೂಡಿದೆ.
ಇದನ್ನೂ ಓದಿ: ಪಿಎಂ-ಕಿಸಾನ್ 21ನೇ ಕಂತು ಬಿಡುಗಡೆ ಮಾಡಿದ ಪ್ರಧಾನಿ ಮೋದಿ: 9 ಕೋಟಿ ರೈತರಿಗೆ ಒಟ್ಟು 18,000 ಕೋಟಿ ರೂ. ಹಣ ಸಂದಾಯ

ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರದಲ್ಲಿ ತಂಗಿ ಮದುವೆ ಮುಗಿಸಿ ಬಂದಿದ್ದ ಲೋಕೇಶ್, ಆರತಕ್ಷತೆ ಕಾರ್ಯಕ್ರಮಕ್ಕಾಗಿ ತಯಾರಿ ಮಾಡುತ್ತಿದ್ದರು. ಬೆಳಗ್ಗೆ ಹೋಗಿ ಹಾಲು ಮತ್ತು ಮೊಸರು ತರಲು ಸಮಯ ಸಿಗಲ್ಲ ಎಂದು ರಾತ್ರಿ ಸಂಬಂಧಿ ಕಿರಣ್ ಜೊತೆ ಬೇಲೂರು ಪಟ್ಟಣಕ್ಕೆ ಬಂದಿದ್ದರು. ಆದರೆ ಅವರಿಬ್ಬರೂ ಹಿಂದಿರುಗಿ ಬಾರದ ಕಾರಣ ಮನೆಯವರು ಹುಡುಕಾಟ ನಡೆಸಿದ್ದಾರೆ. ಈ ವೇಳೆ ಗ್ರಾಮದ ರಸ್ತೆ ಬಳಿಯೇ ಲೋಕೇಶ್ ಮತ್ತು ಕಿರಣ್ ಮೃತದೇಹ ಪತ್ತೆಯಾಗಿವೆ. ವೇಗವಾಗಿ ಬಂದ ಬೈಕ್ ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಪರಿಣಾಮ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದ ತೀವ್ರತೆಗೆ ವಿದ್ಯುತ್ ಕಂಬವೇ ತುಂಡಾಗಿರೋದು ಕಂಡುಬಂದಿದೆ.
ರಾತ್ರಿ ವೇಳೆಯಾದ್ದರಿಂದ ಘಟನೆ ಯಾರ ಗಮನಕ್ಕೂ ಬಾರದೆ ಗಂಭೀರ ಗಾಯಗೊಂಡಿದ್ದ ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಆಲದ ಮರದ ನೆರಳಿನಲ್ಲಿ ಶುರುವಾದ ಭಾರತೀಯ ಸ್ಟಾಕ್ ಮಾರ್ಕೆಟ್ – ಇಂದು 400 ಲಕ್ಷ ಕೋಟಿಯ ಮೌಲ್ಯ!












