ಕಾರ್ಕಳ: (ನ್ಯೂಸ್ ಮಲ್ನಾಡ್ ವರದಿ) ಕುದುರೆಮುಖ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಎಫ್‌ಒ) ಸಿವರಾಮ್ ಬಾಬು ಅವರನ್ನು ರಾಜ್ಯ ಸರ್ಕಾರವು ಜಂಗಲ್ ಲಾಡ್ಜಸ್ ಆ್ಯಂಡ್ ರೆಸಾರ್ಟ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ (ಎಂಡಿ)ಯಾಗಿ ನಿಯೋಜಿಸಿದೆ.
ಐಎಫ್‌ಎಸ್ ಅಧಿಕಾರಿಯಾಗಿರುವ ಸಿವರಾಮ್ ಬಾಬು ಅವರು ಕಳೆದ ಹಲವು ವರ್ಷಗಳಿಂದ ಕುದುರೆಮುಖ ವನ್ಯಜೀವಿ ವಿಭಾಗದ ಡಿಎಫ್‌ಒ ಆಗಿ ಸೇವೆ ಸಲ್ಲಿಸಿ ಗಮನಾರ್ಹ ಕಾರ್ಯಗಳನ್ನು ಕೈಗೊಂಡಿದ್ದರು. ಅವರ ಆಡಳಿತ ವ್ಯಾಪ್ತಿಯ ಕುದುರೆಮುಖ, ಸೋಮೇಶ್ವರ ಹಾಗೂ ಮೂಕಾಂಬಿಕಾ ವನ್ಯಜೀವಿ ವಿಭಾಗಗಳಲ್ಲಿ ಕಳ್ಳಬೇಟೆ ತಡೆ, ಅರಣ್ಯ ಒತ್ತುವರಿ ತೆರವು ಹಾಗೂ ವಿವಿಧ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಇದರ ಜೊತೆಗೆ ಕಾಡ್ಗಿಚ್ಚು ನಿಯಂತ್ರಣಕ್ಕೆ ವಿಶೇಷ ಕಾರ್ಯತಂತ್ರ ರೂಪಿಸಿದ್ದು, ಟ್ರೆಕ್ಕಿಂಗ್ ವ್ಯವಸ್ಥೆಯನ್ನು ಸುಧಾರಿಸಲು ಸ್ಥಳೀಯರನ್ನು ಒಳಗೊಂಡ ಮಾದರಿ ಯೋಜನೆಗಳನ್ನು ಜಾರಿಗೊಳಿಸಿದ್ದರು. ಅರಣ್ಯ ಸಂರಕ್ಷಣೆ ಮತ್ತು ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೆ ಒತ್ತು ನೀಡಿದ ಅವರ ಕಾರ್ಯವೈಖರಿ ಮೆಚ್ಚುಗೆಗೆ ಪಾತ್ರವಾಗಿತ್ತು.

ಸಿವರಾಮ್ ಬಾಬು ಅವರ ವರ್ಗಾವಣೆಯ ಬಳಿಕ ಕುದುರೆಮುಖ ವನ್ಯಜೀವಿ ವಿಭಾಗದ ಡಿಎಫ್‌ಒ ಹುದ್ದೆಗೆ ಸರ್ಕಾರ ಇನ್ನೂ ಹೊಸ ಅಧಿಕಾರಿಯನ್ನು ನೇಮಕಗೊಳಿಸಿಲ್ಲ.













