ಜಯಪುರ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ದೋಣಿಹಡ್ಲು–ದಯಂಬಳ್ಳಿ ಗ್ರಾಮದ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಾಡುಕೋಣ ದಾಳಿಗೆ 45 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ದುರ್ಘಟನೆ ನಡೆದಿದೆ.
ಮೃತರನ್ನು ದೋಣಿಹಡ್ಲು–ದಯಂಬಳ್ಳಿ ಗ್ರಾಮದ ನಿವಾಸಿ ಮಂಜುನಾಥ್ (45) ಎಂದು ಗುರುತಿಸಲಾಗಿದೆ. ಅವರು ತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಏಕಾಏಕಿ ಕಾಡುಕೋಣ ದಾಳಿ ನಡೆಸಿದೆ. ದಾಳಿಯಿಂದ ತೀವ್ರವಾಗಿ ಗಾಯಗೊಂಡ ಮಂಜುನಾಥ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮಂಜುನಾಥ್ ಅವರಿಗೆ ಇಬ್ಬರು ಅಂಗವಿಕಲ ಪುತ್ರರಿದ್ದು, ಅವರ ಅಕಾಲಿಕ ನಿಧನದಿಂದ ಕುಟುಂಬದಲ್ಲಿ ಶೋಕ ಮಡುಗಟ್ಟಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಜಯಪುರ ಪೊಲೀಸ್ ಠಾಣೆ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಯಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿದೆ.
ಮಲೆನಾಡಿನಲ್ಲಿ ಮಿತಿಮೀರಿದ ಕಾಡುಪ್ರಾಣಿ–ಮಾನವ ಸಂಘರ್ಷ:
ಇತ್ತೀಚಿನ ದಿನಗಳಲ್ಲಿ ಮಲೆನಾಡು ಭಾಗದಲ್ಲಿ ಕಾಡುಪ್ರಾಣಿ–ಮಾನವ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದೆ. ವಿಶೇಷವಾಗಿ ಕಾಡಾನೆ ಹಾಗೂ ಕಾಡುಕೋಣಗಳ ದಾಳಿಗಳು ಹೆಚ್ಚಾಗುತ್ತಿದ್ದು, ಜನರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಕಳೆದ ಎರಡು ವರ್ಷಗಳಲ್ಲಿ ಕಾಡಾನೆ ದಾಳಿಯಿಂದ 11 ಮಂದಿ ಹಾಗೂ ಕಾಡುಕೋಣ ದಾಳಿಯಿಂದ 4 ಮಂದಿ ಮೃತಪಟ್ಟಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿರುವ ಪ್ರಕರಣಗಳು ದಾಖಲಾಗಿವೆ.
ಶೃಂಗೇರಿ ಕ್ಷೇತ್ರದ ಕರೆಕಟ್ಟೆ ಪ್ರದೇಶದಲ್ಲಿ ಇಬ್ಬರು ಹಾಗೂ ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಹೋಬಳಿಯಲ್ಲಿ ಕೇವಲ ಮೂರು ತಿಂಗಳ ಅವಧಿಯಲ್ಲಿ ಮೂವರು ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. ಈ ಘಟನೆಗಳು ಸ್ಥಳೀಯರ ಆತಂಕವನ್ನು ಮತ್ತಷ್ಟು ಹೆಚ್ಚಿಸಿವೆ.
ಫೆಬ್ರವರಿ 22ರಂದು ಕಾಡಾನೆ ದಾಳಿಯಿಂದ ಕಾರ್ಮಿಕ ಮಹಿಳೆ ಬೋರಮ್ಮ ಮೃತಪಟ್ಟ ದುರ್ಘಟನೆಯ ನಂತರ ಸ್ಥಳೀಯರು ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆಗೆ ಸಂಬಂಧಿಸಿದಂತೆ ರೈತ ಹೋರಾಟಗಾರರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ಆದರೆ, ಕಾಡಾನೆಗಳ ಹಾವಳಿಯನ್ನು ತಡೆಯಲು ಮತ್ತು ಮಾನವ ಜೀವಹಾನಿಯನ್ನು ತಪ್ಪಿಸಲು ಇದುವರೆಗೆ ಯಾವುದೇ ಶಾಶ್ವತ ಪರಿಹಾರ ಕಂಡುಬಂದಿಲ್ಲ.













