ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಗ್ರಾಮ ಭಾರತ್ ವೇದಿಕೆ ಟ್ರಸ್ಟ್ (ರಿ) ಹಾಗೂ ಭಾರತೀ ತೀರ್ಥ ಸದ್ಭಕ್ತ ಯುವಕ ಸಂಘದ ಸಹಯೋಗದಲ್ಲಿ, ಶೃಂಗೇರಿ ಜಗದ್ಗುರು ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳ 75ನೇ ವರ್ಷದ ವರ್ಧಂತಿ ಪ್ರಯುಕ್ತ ಹಮ್ಮಿಕೊಂಡಿರುವ 75 ಹಿಂದೂ ದೇವಸ್ಥಾನಗಳ ಸ್ವಚ್ಛತಾ ಮತ್ತು ಅಗತ್ಯವಿರುವಲ್ಲಿ ಬಣ್ಣ ಬಳಿಯುವ ಸೇವಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಈ ಯೋಜನೆಯ ಅಂಗವಾಗಿ ಶನಿವಾರ (2026ರ ಜುಲೈ 25ರಂದು) ಶೃಂಗೇರಿಯ ಕುಂಚೆಬೈಲಿನ ಹೇರೂರು ಗಣಪತಿ ದೇವಸ್ಥಾನ ಹಾಗೂ ನಾಗರ ಕಟ್ಟೆಯಲ್ಲಿ ಸ್ವಚ್ಛತಾ ಕಾರ್ಯ ಮತ್ತು ಬಣ್ಣ ಬಳಿಯುವ (Painting) ಸೇವಾ ಕಾರ್ಯವನ್ನು ಯಶಸ್ವಿಯಾಗಿ ನಡೆಸಲಾಯಿತು. ಇದೇ ದೇವಸ್ಥಾನದಲ್ಲಿ ಮೊದಲ ಸೇವಾ ಕಾರ್ಯಕ್ಕೆ ಚಾಲನೆ ನೀಡಲಾಯಿತು.



ದೇವಸ್ಥಾನಗಳು ಕೇವಲ ಆಧ್ಯಾತ್ಮಿಕ ಕೇಂದ್ರಗಳಷ್ಟೇ ಅಲ್ಲ; ಆಧುನಿಕ ಜೀವನದಲ್ಲಿ ಮಾನಸಿಕ ನೆಮ್ಮದಿ, ಆರೋಗ್ಯಕರ ಬದುಕು ಹಾಗೂ ಉತ್ತಮ ಮೌಲ್ಯಗಳ ಬೆಳವಣಿಗೆಗೆ ಪರೋಕ್ಷವಾಗಿ ಸಹಕಾರಿಯಾಗುವ ಪವಿತ್ರ ತಾಣಗಳಾಗಿವೆ. ಈ ನಿಟ್ಟಿನಲ್ಲಿ ದೇವಸ್ಥಾನಗಳ ಸ್ವಚ್ಛತೆ ಹಾಗೂ ಸಂರಕ್ಷಣೆಗೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯವೆಂಬ ಸಂದೇಶವನ್ನು ಈ ಸೇವಾ ಕಾರ್ಯದ ಮೂಲಕ ನೀಡಲಾಯಿತು.



ಈ ಸೇವಾ ಕಾರ್ಯದಲ್ಲಿ ಗ್ರಾಮ ಭಾರತ್ ವೇದಿಕೆ ಟ್ರಸ್ಟ್‌ನ ದೀಪ ಶೆಟ್ಟಿ, ರಂಜಿತ್ ಶೃಂಗೇರಿ, ಆದರ್ಶ ಕಾಂಚಿನಗರ, ರಾಘವೇಂದ್ರ ಹಂಚಲಿ, ನಿರಂಜನ್, ಸುನಿಲ್ ಕಾಂಡ್ಯ, ಕಿರಣ್, ಸುಮನ್, ಸಂತೋಷ್ ಕೆರೆಮನೆ, ನಂದೀಶ್ ಕಿಗ್ಗಾ ಹಾಗೂ ಪ್ರಶಾಂತ್ ರಕ್ತದಾನಿ ಭಾಗವಹಿಸಿದರು. ಹಿಂದೂ ಸೇವಾ ಪ್ರತಿಷ್ಠಾನ (ರಿ) ವತಿಯಿಂದ ನೂತನ್ ಸೂರ್ಯ, ಸುಮಂಗಲಾ ಆನಂದಸ್ವಾಮಿ ಹಾಗೂ ಸಚಿನ್ ಉಪಸ್ಥಿತರಿದ್ದರು.


ದೇವಸ್ಥಾನ ಸಮಿತಿಯ ಶ್ರೀಧರ್ ಭಟ್ ಹಾಗೂ ಇತರ ಸದಸ್ಯರು, ಸ್ಥಳೀಯರಾದ ಅವಿನಾಶ್ ಕುಂಚೆಬೈಲು, ಪ್ರಜ್ವಲ್ ಕುಂತೂರು ಮತ್ತು ನಿತಿನ್ ಬೇಸೂರು ಸಹ ಸೇವಾ ಕಾರ್ಯದಲ್ಲಿ ಕೈಜೋಡಿಸಿದರು. ಕಾರ್ಯಕ್ರಮಕ್ಕೆ ಉಪಹಾರದ ವ್ಯವಸ್ಥೆಯನ್ನು ಅಶ್ವಿನ್ ಕುಂಚೆಬೈಲು ಹಾಗೂ ಬಣ್ಣ (ಪೈಂಟ್) ವ್ಯವಸ್ಥೆಯನ್ನು ಶ್ರೀಜಿತ್ ಗೌಡ ನೆರವೇರಿಸಿದರು. ಈ ಸೇವಾ ಕಾರ್ಯಕ್ಕೆ ಹಿಂದೂ ಸೇವಾ ಪ್ರತಿಷ್ಠಾನ (ರಿ) ಸಹಕಾರ ನೀಡಿತು.















