ಚಿಕ್ಕಮಗಳೂರು: ಅಕ್ರಮವಾಗಿ ಅಳವಡಿಸಿದ್ದ ವಿದ್ಯುತ್ ತಂತಿ ತುಳಿದು ವ್ಯಕ್ತಿ ಸಾವು

ಚಿಕ್ಕಮಗಳೂರು: (ನ್ಯೂಸ್‌ ಮಲ್ನಾಡ್‌ ವರದಿ) ಕಾಡುಹಂದಿ ಬೇಟೆಗಾಗಿ ಅಕ್ರಮವಾಗಿ ಅಳವಡಿಸಿದ್ದ ವಿದ್ಯುತ್ ತಂತಿಯನ್ನು ತುಳಿದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಪ್ರಕರಣ ಹೊರಬರಬಾರದೆಂದು ಆರೋಪಿಗಳು ಮೃತದೇಹವನ್ನು ರಹಸ್ಯವಾಗಿ ಹೂತು ಹಾಕಿ ಬೆಚ್ಚಿಬೀಳಿಸುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಯಗಟಿ ಸಮೀಪದ ದೊಣ್ಣೆಕೋರನಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಮೃತರನ್ನು ಕರಿಯಪ್ಪ (52) ಎಂದು ಗುರುತಿಸಲಾಗಿದೆ.

ಏನಿದು ಘಟನೆ?:
ಪೊಲೀಸ್ ಮೂಲಗಳ ಪ್ರಕಾರ, ಕಾಡುಹಂದಿ ಬೇಟೆಗಾಗಿ ಕೆಲವು ಬೇಟೆಗಾರರು ಜಮೀನಿನ ಸಮೀಪ ಅಕ್ರಮವಾಗಿ ವಿದ್ಯುತ್ ತಂತಿ ಅಳವಡಿಸಿದ್ದರು. ಕರಿಯಪ್ಪ ಅವರು ಅದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ವೇಳೆ ವಿದ್ಯುತ್ ತಂತಿಯನ್ನು ತುಳಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಘಟನೆ ಗಮನಿಸಿದ ಆರೋಪಿಗಳು ವಿಷಯ ಯಾರಿಗೂ ತಿಳಿಯಬಾರದೆಂಬ ಉದ್ದೇಶದಿಂದ ಮೃತದೇಹವನ್ನು ಸಮೀಪದ ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ರಹಸ್ಯವಾಗಿ ಹೂತು ಹಾಕಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.

ನಾಪತ್ತೆ ದೂರುದಿಂದ ಪ್ರಕರಣ ಬಯಲು:
ಕರಿಯಪ್ಪ ಮನೆಗೆ ಮರಳದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಎಲ್ಲೆಡೆ ಹುಡುಕಾಟ ನಡೆಸಿದರೂ ಪತ್ತೆಯಾಗದ ಕಾರಣ ಯಗಟಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.

ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಜಮೀನಿನ ಬಳಿ ಅಳವಡಿಸಿದ್ದ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದರು. ಅದರಲ್ಲಿ ಕರಿಯಪ್ಪ ನಡೆದುಕೊಂಡು ಹೋಗುತ್ತಿರುವುದು ಕಾಣಿಸಿಕೊಂಡಿದ್ದು, ಕೆಲವೇ ಕ್ಷಣಗಳ ಬಳಿಕ ಇನ್ನೊಬ್ಬ ವ್ಯಕ್ತಿ ಅದೇ ಮಾರ್ಗದಲ್ಲಿ ಹೋಗಿರುವುದು ಪತ್ತೆಯಾಗಿದೆ. ಈ ಸುಳಿವಿನ ಆಧಾರದ ಮೇಲೆ ಪೊಲೀಸರು ಅನುಮಾನಿತ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣದ ನಿಜಾಂಶ ಬಹಿರಂಗಗೊಂಡಿದೆ.

ಮೂವರು ಆರೋಪಿಗಳು ಬಂಧನ:
ಪ್ರಕರಣ ಸಂಬಂಧ ಚಂದ್ರಪ್ಪ, ಕೆಂಚಪ್ಪ ಮತ್ತು ಯದುಕುಮಾರ ಎಂಬ ಮೂವರನ್ನು ಯಗಟಿ ಪೊಲೀಸರು ಬಂಧಿಸಿದ್ದಾರೆ.

ತರೀಕೆರೆ ಉಪವಿಭಾಗಾಧಿಕಾರಿ (ಎಸಿ) ಸಮ್ಮುಖದಲ್ಲಿ ಹೂತು ಹಾಕಿದ್ದ ಮೃತದೇಹವನ್ನು ಹೊರತೆಗೆದು ಮಹಜರು ನಡೆಸಲಾಗುತ್ತಿದೆ. ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.

ಯಗಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಕ್ರಮ ಬೇಟೆ ಹಾಗೂ ವಿದ್ಯುತ್ ತಂತಿ ಅಳವಡಿಕೆ ಸೇರಿದಂತೆ ವಿವಿಧ ಆಯಾಮಗಳಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.