ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ರೈತರು ತಮ್ಮ ಜಮೀನಿನಲ್ಲಿ ಬೆಳೆದಿರುವ ಬೆಳೆಗಳ ವಿವರವನ್ನು ಕಡ್ಡಾಯವಾಗಿ ಸ್ವತಃ ದಾಖಲಿಸಿಕೊಳ್ಳಬೇಕು. ಇದರಿಂದ ಬೆಳೆ ವಿಮೆ, ಬೆಳೆ ಹಾನಿ ಪರಿಹಾರ, ಬೆಳೆ ಸಾಲ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಯಾವುದೇ ತೊಂದರೆಯಿಲ್ಲದೆ ಪಡೆಯಲು ಸಾಧ್ಯವಾಗಲಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
‘ನನ್ನ ಬೆಳೆ–ನನ್ನ ಹಕ್ಕು’ ಅಭಿಯಾನದ ಅಂಗವಾಗಿ ಪ್ರಸಕ್ತ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕುರಿತು ರೈತರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಅಧಿಕಾರಿಗಳು ರೈತರ ಜಮೀನಿಗೆ ಭೇಟಿ ನೀಡಿ, ಮೊಬೈಲ್ ಮೂಲಕ ಬೆಳೆ ವಿವರಗಳನ್ನು ದಾಖಲಿಸುವ ವಿಧಾನದ ಬಗ್ಗೆ ಪ್ರಾಯೋಗಿಕವಾಗಿ ಮಾಹಿತಿ ನೀಡಿದರು.

ಅಧಿಕಾರಿಗಳ ಪ್ರಕಾರ, ರೈತರ ಜಮೀನಿನಲ್ಲಿ ಬೆಳೆದಿರುವ ಬೆಳೆಗಳ ಮಾಹಿತಿ ಸರ್ಕಾರಿ ದಾಖಲೆಗಳಲ್ಲಿ ತಪ್ಪಾಗಿ ನಮೂದಾದರೆ ಅಥವಾ ದಾಖಲಾಗದೇ ಉಳಿದರೆ, ಬೆಳೆ ವಿಮೆ, ಬೆಳೆ ಹಾನಿ ಪರಿಹಾರ, ಬೆಳೆ ಸಾಲ, ಸಹಾಯಧನ ಸೇರಿದಂತೆ ಸರ್ಕಾರದ ವಿವಿಧ ಸೌಲಭ್ಯಗಳಿಂದ ವಂಚಿತರಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ರೈತರೇ ತಮ್ಮ ಮೊಬೈಲ್‌ನಲ್ಲಿ ಬೆಳೆ ವಿವರ ದಾಖಲಿಸುವ ವ್ಯವಸ್ಥೆಯನ್ನು ಸರ್ಕಾರ ಜಾರಿಗೆ ತಂದಿದೆ ಎಂದು ವಿವರಿಸಿದರು.

ರೈತರು ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ ‘ಮುಂಗಾರು ರೈತರ ಬೆಳೆ ಸಮೀಕ್ಷೆ 2026–27’ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಂಡು, ರೈತರ ಹೆಸರು, ಮೊಬೈಲ್ ಸಂಖ್ಯೆ, ಸರ್ವೇ ಸಂಖ್ಯೆ, ಜಮೀನಿನ ವಿಸ್ತೀರ್ಣ ಹಾಗೂ ಬೆಳೆ ವಿವರಗಳನ್ನು ದಾಖಲಿಸಬೇಕು. ಬಳಿಕ ಬೆಳೆದಿರುವ ಬೆಳೆಯ ಛಾಯಾಚಿತ್ರವನ್ನು ಅಪ್‌ಲೋಡ್ ಮಾಡುವ ಮೂಲಕ ಸಮೀಕ್ಷೆಯನ್ನು ಪೂರ್ಣಗೊಳಿಸಬಹುದಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ–2026–27ರಡಿ ಭತ್ತದ ಬೆಳೆಗೆ ಬೆಳೆ ವಿಮೆ ನೋಂದಣಿ ಪ್ರಾರಂಭವಾಗಿದ್ದು, ರೈತರು ಆಧಾರ್ ಕಾರ್ಡ್, ಪಹಣಿ ಹಾಗೂ ಬ್ಯಾಂಕ್ ಪಾಸ್‌ಬುಕ್ ದಾಖಲಾತಿಗಳೊಂದಿಗೆ ಸಮೀಪದ ಬ್ಯಾಂಕ್, ಗ್ರಾಮ್ ಒನ್ ಅಥವಾ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಪ್ರತಿ ಎಕರೆಗೆ ₹605 ವಿಮಾ ಕಂತು ಪಾವತಿಸಿ ಆಗಸ್ಟ್ 14ರೊಳಗೆ ನೋಂದಣಿ ಮಾಡಿಸಿಕೊಳ್ಳುವಂತೆ ಅಧಿಕಾರಿಗಳು ಮನವಿ ಮಾಡಿದರು.
ಕ್ಷೇತ್ರ ಭೇಟಿಯಲ್ಲಿ ಉಪ ಕೃಷಿ ನಿರ್ದೇಶಕಿ ಕುಮುದ, ಸಹಾಯಕ ಕೃಷಿ ನಿರ್ದೇಶಕರಾದ ಸುಮ ಹಾಗೂ ವೆಂಕಟೇಶ್ ಚೌವ್ಹಾಣ್, ದಾಸ್ತಾನು ನಿರ್ವಾಹಕ ಪ್ರದೀಪ್ ಉಪಸ್ಥಿತರಿದ್ದರು. ಗ್ರಾಮಸ್ಥರಾದ ಪ್ರದೀಪ್ ರಾಜ್, ಸುನಿಲ್, ಬಿಳಿಯಪ್ಪ, ವಿಜೇಂದ್ರ ಅಣ್ಣೇಗೌಡ ಸೇರಿದಂತೆ ಹಲವರು ಭಾಗವಹಿಸಿ ಬೆಳೆ ಸಮೀಕ್ಷೆ ಕುರಿತು ಮಾಹಿತಿ ಪಡೆದುಕೊಂಡರು. (ವರದಿ- ತನು ಕೊಟ್ಟಿಗೆಹಾರ)













