ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿ ಬೀದಿ ನಾಯಿಗಳ ದಾಳಿಗೆ ಬಕ್ರೀದ್ ಹಬ್ಬಕ್ಕಾಗಿ ಖರೀದಿಸಿ ಮನೆ ಮುಂಭಾಗದಲ್ಲಿ ಕಟ್ಟಿದ್ದ ಮೂರು ಕುರಿಗಳು ಮೃತಪಟ್ಟ ಘಟನೆ ಭಾನುವಾರ ರಾತ್ರಿ ನಡೆದಿದೆ.
ಪಟ್ಟಣದ ಗೌಸಿಯಾ ಮೊಹಲ್ಲಾದ ಡಿವಿಜಿ ರಸ್ತೆಯಲ್ಲಿರುವ ಯು.ಎಸ್. ಕನ್ವೆನ್ಸನ್ ಹಾಲ್ ಮಾಲೀಕರ ಮನೆ ಮುಂದೆ ಕಟ್ಟಿಹಾಕಿದ್ದ ಕುರಿಗಳ ಮೇಲೆ ಸುಮಾರು 10ಕ್ಕೂ ಹೆಚ್ಚು ಬೀದಿ ನಾಯಿಗಳು ದಾಳಿ ನಡೆಸಿ ಕೊಂದು ಹಾಕಿವೆ ಎಂದು ಪುರಸಭೆ ನಾಮನಿರ್ದೇಶನ ಸದಸ್ಯ ಅದಿಲ್ ಪಾಶ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಅವರು, “ಬೀದಿ ನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕುರಿಗಳ ಮೇಲೆ ದಾಳಿ ನಡೆಸಿದ ರೀತಿಯಲ್ಲೇ ನಾಯಿಗಳು ಸಾರ್ವಜನಿಕರ ಮೇಲೂ ದಾಳಿ ಮಾಡುತ್ತಿವೆ. ಪಾದಚಾರಿಗಳು ಹಾಗೂ ವಾಹನ ಸವಾರರು ಭಯದ ವಾತಾವರಣದಲ್ಲಿ ಸಂಚರಿಸುವಂತಾಗಿದೆ” ಎಂದು ಆತಂಕ ವ್ಯಕ್ತಪಡಿಸಿದರು.
ಇದಕ್ಕೂ ಮುನ್ನ ಪುರಸಭೆ ಸಭೆಯಲ್ಲಿ ಬೀದಿ ನಾಯಿಗಳ ಸಮಸ್ಯೆ ಕುರಿತು ಚರ್ಚೆ ನಡೆಸಲಾಗಿದ್ದು, ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.












