
ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ತಾಲೂಕಿನ ಮರ್ಕಲ್ ಗ್ರಾ. ಪಂ ಎದುರು ಬಿಜೆಪಿ ವತಿಯಿಂದ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಯಿತು.
ಇದನ್ನೂ ಓದಿ: ಗ್ರಾಮ ಒನ್ ಕೇಂದ್ರಗಳನ್ನು ಸ್ಥಾಪಿಸಲು ಅರ್ಜಿ ಆಹ್ವಾನ

ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ರಾಜ್ಯ ಸರ್ಕಾರದ ಜನ ವಿರೋಧಿ ಕಾರ್ಯಗಳ ವಿರುದ್ಧ ಪ್ರತಿಭಟನೆ ನಡೆಸಬೇಕು ಎಂಬ ರಾಜ್ಯ ಬಿಜೆಪಿ ನಿರ್ಣಯದಂತೆ ನಿನ್ನೆ ಶೃಂಗೇರಿ ತಾಲೂಕಿನಲ್ಲಿ ಮೊದಲ ಪ್ರತಿಭಟನೆ ನಡೆದಿದೆ.

ಪಂಚಾಯಿತಿ ಎದುರು ಪ್ರತಿಭಟನೆಗೂ ಮೊದಲು ಬಿಜೆಪಿ ಕಾರ್ಯಕರ್ತರು ಮರ್ಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲ್ಲಾರ್‌ಯಿಂದ ಕೋಗಿನಬೈಲು ಸಂಪರ್ಕಿಸುವ ರಸ್ತೆಯಲ್ಲಿ ವಿಪರೀತ ಹೊಂಡ ಗುಂಡಿಗಳಾಗಿದ್ದು, ಇದನ್ನು ಸರಿಪಡಿಸುವುದಾಗಿ ಶಾಸಕರು ಚುನಾವಣಾ ಸಂದರ್ಭದಲ್ಲಿ ಹೇಳಿದ್ದರು. ಆದರೆ, ಆನಂತರ ಈ ಕಡೆ ಒಮ್ಮೆಯೂ ತಲೆಹಾಕಿಲ್ಲ ಎಂದು ಆರೋಪಿಸಿ ಹದಗೆಟ್ಟ ರಸ್ತೆ ಗುಂಡಿಗಳಿಗೆ ಬಾಳೆಗಿಡ ನೆಟ್ಟು ಶಾಸಕರು ಹಾಗೂ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು.

ಇದನ್ನೂ ಓದಿ: ರೈತರಿಗೆ ಹೊಸ ಪಹಣಿ, ನಕ್ಷೆ ನೀಡಲು ಅಭಿಯಾನ; ಸಚಿವ ಕೃಷ್ಣ ಬೈರೇಗೌಡ ಮಾಹಿತಿ
ಮರ್ಕಲ್ ಗ್ರಾಮ ಪಂಚಾಯಿತಿ ಮುಂಭಾಗ ಸೇರಿದ ಕಾರ್ಯಕರ್ತರು ಸರ್ಕಾರದಿಂದ ಗ್ರಾಮ ಪಂಚಾಯಿತಿ ಮೂಲಕ ಆಗಬೇಕಾಗಿರುವ ಯಾವ ಕೆಲಸಗಳಿಗೂ ಆಗುತ್ತಿಲ್ಲ. ಇದು ಕೇವಲ ಒಂದು ಪಂಚಾಯಿತಿ ಮಟ್ಟದ ಸಮಸ್ಯೆಯಾಗಿಲ್ಲ. ತಾಲೂಕಿನಾದ್ಯಂತ ಇಂತಹ ಸಮಸ್ಯೆಗಳಿವೆ. ಸಮಸ್ಯೆಗಳಿಗೆ ಶಾಸಕರು ಸ್ಪಂದಿಸುತ್ತಿಲ್ಲ. ಎಲ್ಲೆಡೆ ಭ್ರಷ್ಟಾಚಾರ ನಡೆಯುತ್ತಿದ್ದು, ಇದಕ್ಕೆ ಶಾಸಕರ ಬೆಂಬಲವೂ ಇದೆ. ಇದು ರಾಜ್ಯ ಸರ್ಕಾರದ ಸಂಪೂರ್ಣ ವೈಫಲ್ಯವಾಗಿದೆ. ಇದನ್ನೆಲ್ಲಾ ಸರಿಪಡಿಸಬೇಕು ಇಲ್ಲದಿದ್ದಲ್ಲಿ ಉಗ್ರ ಪ್ರತಿಭಟನೆಯ ಎಚ್ಚರಿಕೆ ನೀಡಿದರು.
ಕಿಗ್ಗಾ ಬಿಜೆಪಿ ಶಕ್ತಿ ಕೇಂದ್ರದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಉಮೇಶ್ ತಲಗಾರ್, ರಾಜ್ಯ ಬಿಜೆಪಿ ಎಸ್‌ಸಿ ಮೋರ್ಚಾ ವಕ್ತಾರ ಡಾ.ಬಿ ಶಿವಶಂಕರ್, ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ನೂತನ್ ಕುಮಾರ್ ಕಿಗ್ಗಾ, ವೇಣುಗೋಪಾಲ್ ಹೆಚ್.ಎಸ್, ಕಿಗ್ಗಾ ಶಕ್ತಿ ಕೇಂದ್ರದ ಅಧ್ಯಕ್ಷರಾದ ಚಿನ್ನಪ್ಪ ಯಡದಾಳು, ಕಿಗ್ಗಾ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ವಿಜಯ್ ತಿಪ್ಪನಮಕ್ಕಿ, ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ಜಯಶೀಲ ಚಂದ್ರಶೇಖರ್, ತಾಲೂಕು ಕಾರ್ಯದರ್ಶಿ ಸುಧೀಂದ್ರ ಬೆಟ್ಟಗದ್ದೆ, ಉಪಾಧ್ಯಕ್ಷ ಗಿರೀಶ್ ಹೆಗ್ತೂರು ಸೇರಿದಂತೆ ಚುನಾಯಿತ ಸದಸ್ಯರು, ವಿವಿಧ ಪದಾಧಿಕಾರಿಗಳು, ಕಾರ್ಯಕರ್ತರು ಹಾಜರಿದ್ದು ಪ್ರತಿಭಟನೆ ನಡೆಸಿ ಪಿಡಿಓ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು













