ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) 8ನೇ ಶತಮಾನದಲ್ಲಿ ಅದ್ವೈತ ವೇದಾಂತದ ಪ್ರತಿಪಾದಕರಾದ ಶಂಕರಾಚಾರ್ಯರು ಸ್ಥಾಪಿಸಿದ ದೇಶದ ಪ್ರಸಿದ್ಧ ತೀರ್ಥ ಕ್ಷೇತ್ರ ಶೃಂಗೇರಿ ಶಾರದಾ ಪೀಠದ ಬಳಿ ವರ್ಷದ ಹನ್ನೆರೆಡು ತಿಂಗಳು ಶೀಮಠದ ಭಕ್ತಾದಿಗಳಿಗೆ ಧಾರ್ಮಿಕ ವಿಧಿ, ವಿಧಾನಗಳನ್ನು ನೆರವೇರಿಸಲು ನೀರಿನ ಕೊರತೆಯಾಗದಂತೆ ಶ್ರೀಮಠದ ಆಶಯದಂತೆ ತುಂಗಾ ನದಿಗೆ ಅಡ್ಡಲಾಗಿ ಬ್ಯಾರೇಜ್ ನಿರ್ಮಾಣದ ಕಾಮಗಾರಿ ಸದ್ಯದಲ್ಲಿ ಆರಂಭವಾಗಲಿದೆ.
ಇದನ್ನೂ ಓದಿ: ಪಿಎಂ-ಕಿಸಾನ್ 21ನೇ ಕಂತು ಬಿಡುಗಡೆ ಮಾಡಿದ ಪ್ರಧಾನಿ ಮೋದಿ: 9 ಕೋಟಿ ರೈತರಿಗೆ ಒಟ್ಟು 18,000 ಕೋಟಿ ರೂ. ಹಣ ಸಂದಾಯ

ತುಂಗಾ ನದಿಯ ಹರಿವಿನ ಉದ್ದಕ್ಕೂ 19 ಬ್ಯಾರೇಜ್ ಗಳಲ್ಲಿ ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಅವರು ವಿಶ್ವೇಶ್ವರಯ್ಯ ಜಲ ನಿಗಮದ ಸಭೆಯಲ್ಲಿ ಶೃಂಗೇರಿ ಶ್ರೀಮಠದ ಬ್ಯಾರೇಜ್ ಮಾತ್ರ ಮಂಜೂರು ಮಾಡಿಸಿದ್ದಾರೆ. ಯೋಜನೆಯ ಅಂದಾಜು ವೆಚ್ಚ 89 ಕೋಟಿ. ಶೃಂಗೇರಿ ಮಠದ ತೂಗು ಸೇತುವೆಯ ಕೆಳ ಭಾಗದಲ್ಲಿ ನೀರು ಸಂಗ್ರಹಿಸಲು ಬ್ಯಾರೇಜ್ ನಿರ್ಮಿಸಲಿದ್ದಾರೆ.
ನಿರ್ಮಿಸಿದ ಅಡಿಪಾಯ ಹಾಕಲು ಪರೀಕ್ಷೆ ಕಾರ್ಯ(ಟ್ರಯಲ್ ಬೋರ್) ಕಾಮಗಾರಿಯು ಒಂದು ಕೋಟಿ ವೆಚ್ಚದ ಟೆಂಡರ್ ಈಗಾಗಲೇ ಡಿಸೈನ್ ಕನ್ಸಲ್ಟಿಂಗ್ ಪ್ರೈವೇಟ್ ಲಿಮಿಟೆಡ್ ಬೆಂಗಳೂರು ಇವರು ಪಡೆದುಕೊಂಡಿದ್ದಾರೆ. ಮಳೆಯ ನೀರು ಕಡಿಮೆಯಾದ ತಕ್ಷಣ ಕಾಮಗಾರಿ ಆರಂಭವಾಗಲಿದೆ ಎನ್ನಲಾಗಿದೆ.
ಬ್ಯಾರೇಜ್ 135 ಮೀಟರ್ ನಿಂದ 140 ಮೀಟರ್ ಅಗಲವಿರುತ್ತದೆ. ಎತ್ತರ ಅಂದಾಜು 3 ಮೀಟರ್ ಇರಲಿದೆ. ಕಪ್ಪೆ ಶಂಕರದ ಮಟ್ಟದವರೆಗೆ ಮಾತ್ರ ನೀರು ನಿಲ್ಲಲಿದೆ. ನರಸಿಂಹ ವನಕ್ಕೆ ಯಾವುದೇ ಸಮಸ್ಯೆಯಾಗದಂತೆ ಡಿಸೈನ್ ಮಾಡಲಾಗಿದ್ದು, ನೀರು ನಿಲ್ಲಲು ನದಿಯಲ್ಲಿ ಈಗ ಇರುವ ಮಣ್ಣು ಮತ್ತು ಶಿಲ್ಟ್ ತೆಗೆಯಲಾಗುತ್ತದೆ. ಮಣ್ಣು ಕೊರೆಯುವ ಸ್ಥಳಗಳಲ್ಲಿ ತಡೆಗೋಡೆ (ರಿಟೈನ್ ವಾಲ್) ನಿರ್ಮಿಸಿ ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿದು ಹೋಗುವಂತೆ ಸುಯಿಜ್ ಗೇಟ್ ನಿರ್ಮಿಸಲಾಗುವುದು.
ಇದನ್ನೂ ಓದಿ: ಆಲದ ಮರದ ನೆರಳಿನಲ್ಲಿ ಶುರುವಾದ ಭಾರತೀಯ ಸ್ಟಾಕ್ ಮಾರ್ಕೆಟ್ – ಇಂದು 400 ಲಕ್ಷ ಕೋಟಿಯ ಮೌಲ್ಯ!
ಯೋಜನೆಯಲ್ಲಿ ಯಾವುದೇ ಕಾಡು ನಾಶ ಮತ್ತು ಭೂಮಿ ಮುಳುಗಡೆ ಆಗದಿರುವುದರಿಂದ ಪರಿಸರ ಸ್ನೇಹಿ ಯೋಜನೆ ಆಗಲಿದೆ. ಸುತ್ತಮುತ್ತಲಿನ ಪ್ರದೇಶದಲ್ಲಿ ಅಂತರ ಜಲ ಅಭಿವೃದ್ಧಿಯಾಗಲಿದೆ. ಪ್ರವಾಸೋದ್ಯಮಕ್ಕೆ ಮತ್ತಷ್ಟು ಮೆರುಗು ಬರಲಿದೆ. ವರ್ಷದ ಎಲ್ಲಾ ಖುತುವಿನಲ್ಲಿ ನೀರು ನಿಲ್ಲುವುದರಿಂದ ಬೋಟಿಂಗ್ ಮತ್ತು ಗಾಂಧಿ ಮೈದಾನದಲ್ಲಿ ಸುಂದರವಾದ ಪಾರ್ಕ್ ನಿರ್ಮಿಸುವ ಬಗ್ಗೆ ಶಾಸಕ ಟಿ.ಡಿ.ರಾಜೇಗೌಡರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.












