ಎನ್ ಆರ್ ಪುರ: (ನ್ಯೂಸ್ ಮಲ್ನಾಡ್ ವರದಿ) ಏಕಾಏಕಿ ಸಾಗುವಳಿ ಭೂಮಿ ವಶಪಡಿಸಿಕೊಳ್ಳುವುದರ ವಿರುದ್ಧ ಹಾಗೂ ಅವೈಜ್ಞಾನಿಕ ಅರಣ್ಯ ಯೋಜನೆಗಳ ಜಾರಿ ವಿರುದ್ಧ ಶೃಂಗೇರಿ ಕ್ಷೇತ್ರ ಮಟ್ಟದಲ್ಲಿ ಬೃಹತ್ ಪ್ರತಿಭಟನೆಗೆ ಕರೆ ನೀಡಲಾಗಿದೆ
ಕೇಂದ್ರ ಸರ್ಕಾರ ಜುಲೈ 31 ರಂದು ಪರಿಸರ ಸೂಕ್ಷ್ಮ ವಲಯದ ಕರಡು ಅಧಿಸೂಚನೆ ಹೊರಡಿಸಿದೆ. ಇದಕ್ಕೆ ಆಕ್ಷೇಪಣೆ ಸಲ್ಲಿಸಲು 60 ದಿನಗಳ ಕಾಲಾವಕಾಶ ನೀಡಿದೆ. ಮಾನ್ಯ ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯರು 60 ದಿನಗಳ ಕಾಲವನ್ನು 90 ದಿನಗಳ ವರೆಗೆ ಕಾಲಾವಕಾಶ ಕೊಡಿಸಬೇಕು. ಹಾಗೂ ಆಕ್ಷೇಪಣೆ ಸಲ್ಲಿಕೆ ಮಾಡಲು ಸ್ಥಳೀಯ ಕನ್ನಡ ಭಾಷೆಯಲ್ಲಿ ಸರ್ಕಾರಿ ಅಧಿಸೂಚನೆ ಹೊರಡಿಸಬೇಕು. ಪ್ರತಿಭಟನೆಯಲ್ಲಿ ಭಾಗವಹಿಸಿ ಅವರ ನಿಲುವು ತಿಳಿಸಬೇಕು.

ಹಾಗೆಯೇ ರಾಜ್ಯ ಸರ್ಕಾರದ ಅರಣ್ಯ ಪರಿಸರ ಮತ್ತು ಜೀವಶಾಸ್ತ್ರ ಇಲಾಖೆಯ ಸಚಿವರಾದ ಮಾನ್ಯ ಈಶ್ವರ ಖಂಡ್ರೆ ಅವರು ಅರಣ್ಯ ಇಲಾಖೆಗೆ ಬರೆದಿರುವ ಪತ್ರದಲ್ಲಿ 2015 ಈಚೆಗೆ ಒತ್ತುವರಿ ಜಮೀನು ಅನಧಿಕೃತ ರೆಸಾರ್ಟ್, ಬಡಾವಣೆ, ಹೋಂ ಸ್ಟೇ ವಶಪಡಿಸಿಕೊಂಡು ತಿಂಗಳವೊಳಗೆ ವರದಿ ನೀಡುವಂತೆ ಕೋರಿದ್ದಾರೆ.
ಶಿರೂರು ಹಾಗು ವಯನಾಡು ದುರಂತದ ತರುವಾಯ ಪಶ್ಚಿಮ ಘಟ್ಟವನ್ನು ಉಳಿಸಲು ಈ ಕ್ರಮ ಕೈ ಗೊಂಡಿದೆ ಎಂದು ಸರ್ಕಾರ ಹೇಳಿದೆ. ಈಗಾಗಲೆ ಮುಂದುವರಿದ ಕ್ರಮವಾಗಿ ಸಾಗುವಳಿ ಭೂಮಿಯನ್ನು ಸರ್ವೆ ಮಾಡಿ ಖುಲ್ಲಾ ಮಾಡಲು ಅರಣ್ಯ ಇಲಾಖೆ ಹೊರಟಿರುವುದು ಮಲೆನಾಡಿನ ರೈತರ ಆತಂಕಕ್ಕೆ ಕಾರಣವಾಗಿದೆ. ಹಾಗಾಗಿ ರೈತರ ನಾಗರಿಕರ ಕೃಷಿ ಕಾರ್ಮಿಕರ ಬದುಕಿನ ಉಳಿವಿಗಾಗಿ ಮಲೆನಾಡಿನ ರೈತರ ಜೀವನಕ್ಕೆ ಕಂಟಕ ಪ್ರಾಯವಾಗಿರುವ ಯೋಜನೆ ವಿರುದ್ಧ ಶೃಂಗೇರಿ ಕ್ಷೇತ್ರದ ರೈತರನ್ನು ನಾಗರಿಕರನ್ನು ರಾಜಕೀಯ ಪಕ್ಷಗಳನ್ನು ವಿವಿಧ ಸಂಘ ಸಂಸ್ಥೆಗಳ ಸಹಕಾರದ ಜೊತೆಗೆ ಮಲೆನಾಡು ನಾಗರಿಕ ರೈತ ಹಿತರಕ್ಷಣಾ ನಮಿತಿ ಶೃಂಗೇರಿ ಕ್ಷೇತ್ರ ಆಗಸ್ಟ್ 17 ರಂದು ಕೊಪ್ಪದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಬಾಳೆಹೊನ್ನೂರು , ಖಾಂಡ್ಯ ಹೋಬಳಿಯ ಸಭೆಯ ನಂತರ ಪತ್ರಿಕಾ ಹೇಳಿಕೆಯಲ್ಲಿ ಮಲೆನಾಡು ರೈತ ನಾಗರೀಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಎಂ.ಎನ್ ನಾಗೇಶ್ ಅವರು ಹೇಳಿದರು.
ಈಗಾಗಲೇ ಮೂರು ತಾಲ್ಲೂಕಿನ ಹೋಬಳಿಗಳಲ್ಲಿ ರೈತರ ನಾಗರಿಕರ ಸಭೆ ನಡೆಸಲಾಗಿದ್ದು, ಅಲ್ಲಿ ಬೃಹತ್ ಪ್ರತಿಭಟನೆ ಮಾಡಿ ಕ್ಷೇತ್ರದ ಬಂದ್ ಮಾಡುವಂತೆ ಸಲಹೆಗಳು ಬಂದಿದೆ. ಎಲ್ಲಾ ನಾಗರಿಕರ ರೈತರ ಅಭಿಪ್ರಾಯ ಪಡೆದು ಪ್ರತಿಭಟನೆಯ ಸ್ವರೂಪವನ್ನು ನಿರ್ಧಾರ ಮಾಡಲಾಗುವುದು ಎಂದು ಹೇಳಿದರು.
ಸರಕಾರ ಈಗಾಗಲೇ ರೈತರು ಪಾರಂ ನಂಬರ್ 50,53,57,94,ಸಿ,94ಸಿ,ಸಿ ಪಾರಂಪರಿಕ ಅರಣ್ಯ ಹಕ್ಕುಗಳ ಅರ್ಜಿ ಸಲ್ಲಿಸಿದ್ದು, ಅದನ್ನು ಪರಿಶೀಲಿಸಿ ಸರ್ಕಾರ ಇನ್ನೂ ರೈತರಿಗೆ ಹಕ್ಕು ಪತ್ರ ನೀಡಿಲ್ಲ, ಜೊತೆಗೆ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ಜಂಟಿ ನರ್ವೆ ನಡೆಸಿಲ್ಲ. ನೆಕ್ಷನ್ 4ರ ಮೀಸಲು ಅರಣ್ಯಕ್ಕೆ ಸಂಬಂಧಿಸಿದಂತೆ ಪಾರೆಸ್ಟ್ ನೆಟಲೈಂಟ್ ಆಫೀಸರ್ ಅಧ್ಯಯನ ಮಾಡದೆ, ಅರ್ಜಿ ಇತ್ಯರ್ಥ ಪಡಿಸಿಲ್ಲ, ಡೀಮ್ ಅರಣ್ಯ ಪ್ರಕರಣ ಬಾಕಿ ಇರುವಂತೆ ರೈತರ ಸಾಗುವಳಿ ಭೂಮಿ ಖುಲ್ಲಾ ಮಾಡಲು ಹೊರಟಿರುವುದು ರೈತರಿಗೆ ತೊಂದರೆ ಆಗಿದೆ. ಈ ಸಮಸ್ಯೆಗಳು ಪರಿಹಾರ ಆಗುವ ತನಕ ಯಥಾಸ್ಥಿತಿ ಕಾಪಾಡುಬೇಕು ಎಂದು ಪ್ರತಿಭಟನೆ ಹಮ್ಮಿಕೊಂಡಿದೆ ಎಂದರು.
ಪ್ರತಿಭಟನೆಗೆ ಮಲೆನಾಡಿನ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷಾತೀತ ಹೋರಾಟ ಮಾಡಲು ತೀರ್ಮಾನಿಸಿದೆ. ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರ ಕೂಡ ನೀಡಬೇಕು ಇದು ಮಲೆನಾಡಿನ ಜನಜೀವನದ ಅಸ್ತಿತ್ವದ ಪ್ರಶ್ನೆ ಹಾಗಾಗಿ ಎಲ್ಲರೂ ಪಕ್ಷಾತೀತವಾಗಿ ಹೋರಾಟಕ್ಕೆ ಕೈ ಜೋಡಿಸಬೇಕು ಎಂದು ವಿನಂತಿ ಮಾಡಿದರು.
ಕ್ಷೇತ್ರದ ಮಾನ್ಯ ಶಾಸಕರು ಈ ಕುರಿತು ಅರಣ್ಯ ಸಚಿವರು ಹಾಗೂ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳನ್ನೂ ಜಿಲ್ಲಾಧಿಕಾರಿಗಳನ್ನು ಕರೆಸಬೇಕು .ರೈತರಿಗೆ ಸ್ಪಷ್ಟ ಮಾಹಿತಿ ನೀಡಬೇಕು ಎಂದು ವಿನಂತಿ ಮಾಡಿದರು.
ಭೂ ಕುಸಿತಕ್ಕೆ ಒತ್ತುವರಿಯೇ ಕಾರಣ ಎನ್ನುವ ಅರಣ್ಯ ಸಚಿವಾಲಯದ ತೀರ್ಮಾನ ಸರಿಯಲ್ಲ, ಅಭಿವೃದ್ಧಿ ಹೆಸರಲ್ಲಿ ನಡೆಯುತ್ತಿರುವ ರಸ್ತೆ ಅಗಲೀಕರಣ, ಎತ್ತಿನ ಹೊಳೆ ಯೋಜನೆಗಳು, ಎಂಪಿಎಂ ಗೆ ನೀಡಿರುವ ಅರಣ್ಯ ಭೂಮಿಯ ಲೀಸ್, ಅಕೇಶಿಯ ನೀಲಗಿರಿ ಪ್ಲಾಂಟೇಶನ್ ಬಗ್ಗೆ ಸರ್ಕಾರದ ನಿಲುವು ಏನು ಎಂದು ತಿಳಿಸಬೇಕು.
ಈ ಹೋರಾಟ ಮಲೆನಾಡಿನ ಸಣ್ಣ ರೈತರು, ಕೃಷಿ ಕಾರ್ಮಿಕರು, ಕೃಷಿ ಅವಲಂಬಿತ ಉದ್ಯೋಗಗಳು, ಬಡವರ ಪರವಾದ ಹೋರಾಟ, ರೈತನೇ ದೇಶದ ಬೆನ್ನೆಲುಬು ಎಂದು ಭಾಷಣ ಮಾಡುತ್ತಾ,ರೈತರ ಪಕ್ಕೆಲುಬುಗಳ ಪುಡಿ ಮಾಡಬಾರದು ಎಂದು ಹೇಳಿದರು.ಹಾಗಾಗಿ ಪ್ರತಿಭಟನೆಗೆ ಮಲೆನಾಡಿನ ಎಲ್ಲಾ ನಾಗರಿಕರು ಸಹಕಾರ ನೀಡಿ ಭಾಗವಹಿಸಬೇಕು ಎಂದು ವಿನಂತಿ ಮಾಡಿದರು.












