ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ಸ್ನೇಹಿತರ ನಡುವೆ ನಡೆದ ಗಲಾಟೆ ಇದೀಗ ಕೊಲೆಯಲ್ಲಿ ಅಂತ್ಯವಾಗಿದೆ. ಪಾರ್ಟಿ ಮಾಡುವ ಸಮಯದಲ್ಲಿ ಉಂಟಾದ ಜಗಳದಿಂದ ಸ್ನೇಹಿತನೇ ಚಾಕುವಿನಿಂದ ಇರಿದ ಪರಿಣಾಮ, ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಶನಿವಾರ ಮೆಗ್ಗಾನ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ; ಬೆಂಬಲ ಬೆಲೆ ಯೋಜನೆಯಡಿಯಲ್ಲಿ ವಿವಿಧ ಬೆಳೆಗಳ ಖರೀದಿ ಅವಧಿ ವಿಸ್ತರಣೆ

ಮೃತರನ್ನು ಇಮಾಮ್ ಬಾಡ ನಿವಾಸಿ ತೌಫಿಕ್ (40) ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿ ಸಯ್ಯದ್ ಅನ್ವರ್ (35) ಎಂಬಾತನನ್ನು ಕೋಟೆ ಪೊಲೀಸರು ಈಗಾಗಲೇ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಏನಿದು ಘಟನೆ:
ಫೆಬ್ರವರಿ 19ರ ತಡರಾತ್ರಿ ಶಿವಮೊಗ್ಗದ ಬೆಕ್ಕಿನ ಕಲ್ಮಠದ ಬಳಿ ಸ್ನೇಹಿತರಾದ ತೌಫಿಕ್ ಮತ್ತು ಸಯ್ಯದ್ ಅನ್ವರ್ ಪಾರ್ಟಿ ಮಾಡುತ್ತಿದ್ದರು. ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ಹೋಗಿದೆ. ಸಿಟ್ಟಿಗೆದ್ದ ಸಯ್ಯದ್ ಅನ್ವರ್, ತನ್ನ ಬಳಿಯಿದ್ದ ಚಾಕುವಿನಿಂದ ತೌಫಿಕ್ ಅವರ ಕುತ್ತಿಗೆಯ ಭಾಗಕ್ಕೆ ಇರಿದಿದ್ದಾನೆ ಎನ್ನಲಾಗಿದೆ.
ಕುತ್ತಿಗೆಯಿಂದ ತೀವ್ರ ರಕ್ತಸ್ರಾವವಾಗುತ್ತಿದ್ದರೂ ಪ್ರಾಣಾಪಾಯದಿಂದ ಪಾರಾಗಲು ತೌಫಿಕ್ ಕುತ್ತಿಗೆಯನ್ನು ಕೈಯಿಂದ ಒತ್ತಿ ಹಿಡಿದುಕೊಂಡು ಬಿ.ಹೆಚ್. ರಸ್ತೆಯ ಹೊಳೆ ಬಸ್ ಸ್ಟಾಪ್ ಬಳಿ ಬಂದು ಕುಳಿತಿದ್ದರು. ಆ ಸಮಯದಲ್ಲಿ ಗಸ್ತಿನಲ್ಲಿದ್ದ 112 ತುರ್ತು ವಾಹನದ ಸಿಬ್ಬಂದಿಗಳು ಕೂಡಲೇ ತಮ್ಮದೇ ವಾಹನದಲ್ಲಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
















