ಚಿಕ್ಕಮಗಳೂರು: ಡಿಸೆಂಬರ್ 2 & 3ರಂದು ನಗರದ ಈ ಮಾರ್ಗದಲ್ಲಿ ವಾಹನ ನಿಲುಗಡೆ, ಸಂಚಾರ ನಿಷೇಧ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ದತ್ತಜಯಂತಿ ಪ್ರಯುಕ್ತ ಡಿಸೆಂಬರ್ 2ರ ಅನಸೂಯ ಜಯಂತಿ ಹಾಗೂ ಡಿಸೆಂಬರ್ 3ರ ಶೋಭಾಯಾತ್ರೆಯ ಹಿನ್ನೆಲೆಯಲ್ಲಿ ನಗರದ ಹಲವು ಕಡೆಗಳಲ್ಲಿ ವಾಹನಗಳ ನಿಲುಗಡೆ ಹಾಗೂ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.


ಇದನ್ನೂ ಓದಿ: ಆಧಾರ್‌ & ರೇಷನ್‌ ಕಾರ್ಡ್‌ ಇದ್ರೆ ಉಚಿತ ತರಬೇತಿಗೆ ಅರ್ಜಿ ಸಲ್ಲಿಸಿ


ಎಲ್ಲೆಲ್ಲಿ ವಾಹನ ಸಂಚಾರ ಬಂದ್:
* ಡಿಸೆಂಬರ್ 2ರ ಅನಸೂಯ ಜಯಂತಿಯಂದು ಮೆರವಣಿಗೆ ಸಂಚರಿಸುವ ಮಾರ್ಗವಾದ ಕೆ.ಎಂ.ರಸ್ತೆ (ಕೆ.ಎಸ್.ಆರ್.ಟಿ.ಸಿ. ಡಿಪೋದಿಂದ ಶೃಂಗಾರ್ ಸರ್ಕಲ್‌ವರೆಗೆ ಐ.ಜಿ.ರಸ್ತೆಯ ಎಡಭಾಗದ ಪಥದಲ್ಲಿ ವಾಹನ ನಿಲುಗಡೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇಲ್ಲಿ ನಿಲುಗಡೆ ಮಾಡುವ ವಾಹನಗಳಿಗೆ ಜಿಲ್ಲಾ ಆಟದ ಮೈದಾನದ ಸುತ್ತಮುತ್ತ ಮತ್ತು ಬಾರ್‌ಲೇನ್ ರಸ್ತೆಯನ್ನು ಬದಲಿ ಸ್ಥಳವಾಗಿ ನೀಡಲಾಗಿದೆ.

* ರತ್ನಗಿರಿ ರಸ್ತೆಯ ಶೃಂಗಾರ್ ಸರ್ಕಲ್‌ನಿಂದ ಭುವನೇಶ್ವರಿ ವೃತ್ತ(ಟೌನ್ ಕ್ಯಾಂಟೀನ್‌ದವರೆಗೆ ಆರ್.ಜಿ.ರಸ್ತೆಯ ಎಡಭಾಗದ ಪಥದಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ. ಇಲ್ಲಿಗೆ ಪರ್ಯಾಯವಾಗಿ ಬಸವನಹಳ್ಳಿ ರಸ್ತೆ ಮತ್ತು ವಿಜಯಪುರ ಮುಖ್ಯ ರಸ್ತೆಯಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗುವುದು.

* ಅನಸೂಯ ಜಯಂತಿಯ ಮೆರವಣಿಗೆ ಸಾಗುವ ಬೋಳರಾಮೇಶ್ವರ ದೇವಸ್ಥಾನದಿಂದ ಶೃಂಗಾರ್ ಸರ್ಕಲ್‌ವರೆಗೆ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ಈ ಮಾರ್ಗಕ್ಕೆ ಪರ್ಯಾಯವಾಗಿ ಮೂಡಿಗೆರೆಯಿಂದ ಕಡೂರು ಕಡೆ ಸಂಚರಿಸುವ ವಾಹನಗಳು ಆಜಾದ್ ಪಾರ್ಕ್-ಬೈಪಾಸ್ ರಸ್ತೆಯ ಮೂಲಕ ಸಂಚರಿಸಬೇಕು.

* ಕಡೂರಿನಿಂದ ಮೂಡಿಗೆರೆಗೆ ಸಂಚರಿಸುವ ವಾಹನಗಳು ಬೈಪಾಸ್, ಮಾರ್ಕೇಟ್ ರಸ್ತೆ ಮತ್ತು ಎಂ.ಜಿ.ರಸ್ತೆ ಮೂಲಕ ಸಂಚರಿಸಬೇಕು. ರತ್ನಗಿರಿ ರಸ್ತೆಯಲ್ಲಿ ಶೃಂಗಾರ್ ಸರ್ಕಲ್‌ನಿಂದ ಟೌನ್ ಕ್ಯಾಂಟೀನ್ ಸರ್ಕಲ್‌ವರೆಗೆ ವಾಹನ ಸಂಚಾರವನ್ನು ನಿಷೇಧಿಸಲಾಗಿದ್ದು, ಈ ಮಾರ್ಗಕ್ಕೆ ಪರ್ಯಾಯವಾಗಿ ಬಸವನಹಳ್ಳಿ ರಸ್ತೆ ಮತ್ತು ಕೆಂಪನಹಳ್ಳಿ ರಸ್ತೆ ಮೂಲಕ ಸಂಚರಿಸಬೇಕು.

* ಮೂಡಿಗೆರೆ ಕಡೆಯಿಂದ ಬರುವ, ಹಾಸನ ಹಾಗೂ ಕಡೂರು ಕಡೆಗೆ ಹೋಗುವ ಎಲ್ಲಾ ರೀತಿಯ ಭಾರೀ ಸರಕು ವಾಹನಗಳು ಇಂಡಸ್ಟ್ರಿಯಲ್ ಏರಿಯಾ ಕಡೆಯಿಂದ ಸಾಗಬೇಕು. ಅದೇ ರೀತಿಯ ಕಡೂರು ಕಡೆಯಿಂದ ಬರುವ ಮೂಡಿಗೆರೆ ಹಾಗೂ ಹಾಸನ ಕಡೆಗೆ ಹೋಗುವ ಎಲ್ಲಾ ಭಾರಿ ಸರಕು ವಾಹನಗಳು ಬೈಪಾಸ್ ಮೂಲಕ ಪೈ ಸರ್ಕಲ್ ಕಡೆಗೆ ಹೋಗಬೇಕು.


 

ಇದನ್ನೂ ಓದಿ: ವಿದ್ಯಾಸಿರಿ ಸೇರಿ ವಿವಿಧ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಕೆ


ಡಿಸೆಂಬರ್‌ ಡಿ.3ರಂದು‌ ಎಲ್ಲೆಲ್ಲಿ ವಾಹನ ಸಂಚಾರ ಬಂದ್:
* ಶೋಭಾಯಾತ್ರೆಯ ದಿನವಾದ ಡಿ.3 ರಂದು ಮೆರವಣಿಗೆ ಸಂಚರಿಸುವ ರತ್ನಗಿರಿ ರಸ್ತೆಯ ಫುಡ್ ಪ್ಯಾಲೆಸ್‌ನಿಂದ ಟೌನ್ ಕ್ಯಾಂಟೀನ್‌ವರೆಗೆ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದ್ದು, ಇಲ್ಲಿಗೆ ಪರ್ಯಾಯವಾಗಿ ವಿಜಯಪುರ ಮುಖ್ಯರಸ್ತೆ ವಿಜಯಪುರ ಫುಡ್ ಕೋರ್ಟ್, ಕೆಂಪನಹಳ್ಳಿ ರಸ್ತೆ ವೀರಭದ್ರೇಶ್ವರ ದೇವಾಲಯದ ರಸ್ತೆಯಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗುವುದು.

* ಬಸವನಹಳ್ಳಿ ರಸ್ತೆಯ ಭುವನೇಶ್ವರಿ ಸರ್ಕಲ್ (ಟೌನ್ ಕ್ಯಾಂಟೀನ್, ಕೆ.ಇ.ಬಿ. ಸರ್ಕಲ್‌ನಿಂದ ಹನುಮಂತಪ್ಪ ಸರ್ಕಲ್‌ವರೆಗೆ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದ್ದು, ಇದಕ್ಕೆ ಪರ್ಯಾಯವಾಗಿ ಕೆಂಪನಹಳ್ಳಿ ರಸ್ತೆ, ಕುಂಬಾರ ಬೀದಿ, ರಾಮನಹಳ್ಳಿ ಮತ್ತು ವಿಜಯಪುರದಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸಲಾಗುವುದು.

* ಮಹಾತ್ಮಗಾಂಧಿ ರಸ್ತೆಯ ಹನುಮಂತಪ್ಪ ಸರ್ಕಲ್‌ನಿಂದ ಆಜಾದ್ ಪಾರ್ಕ್‌ವರೆಗೆ ವಾಹನ ನಿಲುಗಡೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಇದಕ್ಕೆ ಪರ್ಯಾಯವಾಗಿ ಐ.ಜಿ.ರಸ್ತೆ, ಅಂಬೇಡ್ಕರ್ ರಸ್ತೆ ಮತ್ತು ಬಾರ್‌ಲೇನ್ ರಸ್ತೆಗಳಲ್ಲಿ ನಿಲುಗಡೆಗೆ ಅವಕಾಶ ಒದಗಿಸಲಾಗುವುದು.

* ಶೋಭಾಯಾತ್ರೆ ಸಾಗುವ ರತ್ನಗಿರಿ ರಸ್ತೆಯ ಫುಡ್ ಪ್ಯಾಲೇಸ್‌ನಿಂದ ಭುವನೇಶ್ವರಿ ಸರ್ಕಲ್‌ವರೆಗೆ ವಾಹನ ಸಂಚಾರವನ್ನು ನಿಷೇಧಿಸಲಾಗಿದ್ದು, ಪರ್ಯಾಯವಾಗಿ ಬಸವನಹಳ್ಳಿ ರಸ್ತೆ, ವಿಜಯಪುರ, ಕೆಂಪನಹಳ್ಳಿ ರಸ್ತೆ ಮತ್ತು ವೀರಭದ್ರೇಶ್ವರ ದೇವಸ್ಥಾನದ ರಸ್ತೆಯಲ್ಲಿ ವಾಹನಗಳು ಸಂಚರಿಸಬೇಕು.

* ಬಸವನಹಳ್ಳಿ ರಸ್ತೆಯ ಭುವನೇಶ್ವರಿ ಸರ್ಕಲ್‌ನಿಂದ ಹನುಮಂತಪ್ಪ ಸರ್ಕಲ್‌ವರೆಗೆ ವಾಹನ ಸಂಚಾರವನ್ನು ನಿಷೇಧಿಸಲಾಗಿದ್ದು, ಪರ್ಯಾಯವಾಗಿ ರತ್ನಗಿರಿ ರಸ್ತೆ, ಕೆಂಪನಹಳ್ಳಿ ರಸ್ತೆ ಮತ್ತು ರಾಮನಹಳ್ಳಿ ವಿಜಯಪುರ ರಸ್ತೆಯಲ್ಲಿ ವಾಹನಗಳು ಸಂಚರಿಸಬೇಕು.

* ಮಹಾತ್ಮಗಾಂಧಿ ರಸ್ತೆಯ ಹನುಮಂತಪ್ಪ ಸರ್ಕಲ್‌ನಿಂದ ಆಜಾದ್ ಪಾರ್ಕ್ ವೃತ್ತದವರೆಗೆ ವಾಹನ ಸಂಚಾರವನ್ನು ನಿಷೇಧಿಸಲಾಗಿದ್ದು, ಇದಕ್ಕೆ ಪರ್ಯಾಯವಾಗಿ ಅಂಬೇಡ್ಕರ್ ರಸ್ತೆ ಇಂದಿರಾಗಾಂಧಿ ರಸ್ತೆ ಮತ್ತು ಬಾರ್‌ಲೇನ್ ರಸ್ತೆಯಲ್ಲಿ ವಾಹನಗಳು ಸಂಚರಿಸಬೇಕು.

* ಪ್ರಸ್ತುತ ಅಂಬೇಡ್ಕ‌ರ್ ರಸ್ತೆಯು ದ್ವಿಮುಖ ರಸ್ತೆಯಾಗಿದ್ದು, ಶೋಭಾಯಾತ್ರೆಯ ದಿನದಂದು ಕೆ.ಎಂ.ರಸ್ತೆ ಕ್ರಾಸ್‌ನಿಂದ ಅಂಬೇಡ್ಕ‌ರ್ ರಸ್ತೆಯ ಮೂಲಕ ದೀಪಾ ನರ್ಸಿಂಗ್ ಹೋಂ ಕಡೆಗೆ ಏಕಮುಖ ಸಂಚಾರ ವ್ಯವಸ್ಥೆ ಜಾರಿಯಲ್ಲಿರುತ್ತದೆ. ಅಂದು ಮೂಡಿಗೆರೆ ಕಡೆಯಿಂದ ಬರುವ, ಹಾಸನ ಹಾಗೂ ಕಡೂರು ಕಡೆಗೆ ಹೋಗುವ ಎಲ್ಲಾ ರೀತಿಯ ಭಾರೀ ಸರಕು ವಾಹನಗಳು ಇಂಡಸ್ಟ್ರಿಯಲ್ ಏರಿಯಾ ಕಡೆಯಿಂದ ಸಾಗಬೇಕು.

ಅದೇ ರೀತಿ ಕಡೂರು ಕಡೆಯಿಂದ ಬರುವ ಮೂಡಿಗೆರೆ ಹಾಗೂ ಹಾಸನ ಕಡೆಗೆ ಹೋಗುವ ಎಲ್ಲಾ ಭಾರಿ ಸರಕು ವಾಹನಗಳು ಬೈಪಾಸ್ ರಸ್ತೆ ಮೂಲಕ ಪೈ ಸರ್ಕಲ್‌ನಿಂದ ಹಿರೇಮಗಳೂರು ಮತ್ತು ಹಿರೇಮಗಳೂರು ಸೇತುವೆ ಮೂಲಕ ಇಂಡಸ್ಟ್ರಿಯಲ್ ಏರಿಯಾ ಕಡೆಗೆ ಹೋಗಬೇಕು ಎಂದು ಜಿಲ್ಲಾಧಿಕಾರಿಗಳು ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.