ಚಿಕ್ಕಮಗಳೂರು ನಗರದ ಹೊರವಲಯದ ಹೌಸಿಂಗ್ ಬೋರ್ಡ್ ಬಳಿ ನಿರ್ಮಾಣವಾಗುತ್ತಿರುವ ನೂತನ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಗಣಪತಿ ದೇವಾಲಯ ನಿರ್ಮಾಣಕ್ಕೆ ದಲಿತ ಸಂಘಟನೆಗಳ ಒಕ್ಕೂಟ ವಿರೋಧ ವ್ಯಕ್ತಪಡಿಸಿದೆ. ನ್ಯಾಯಾಲಯ ಸರ್ವಧರ್ಮ ಸಮಾನತೆಯ ಪ್ರತೀಕವಾಗಿರುವುದರಿಂದ ಧಾರ್ಮಿಕ ಕಟ್ಟಡ ನಿರ್ಮಾಣ ಸಂವಿಧಾನಾತ್ಮಕ ತತ್ವಗಳಿಗೆ ಧಕ್ಕೆ ಉಂಟುಮಾಡುತ್ತದೆ ಎಂದು ಸಂಘಟನೆಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿವೆ.
ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ; ಬೆಂಬಲ ಬೆಲೆ ಯೋಜನೆಯಡಿಯಲ್ಲಿ ವಿವಿಧ ಬೆಳೆಗಳ ಖರೀದಿ ಅವಧಿ ವಿಸ್ತರಣೆ

ಇನ್ನೂ ಕೋರ್ಟ್ ಆವರಣದಲ್ಲಿ ಇನ್ನೂ ನಿರ್ಮಾಣವಾಗದ ಗಣಪತಿ ದೇವಾಲಯಕ್ಕೆ ದಲಿತ ಸಂಘಟನೆಗಳು ಆಕ್ರೋಶ ವಿರೋಧಿಸಿದ ಬೆನ್ನಲ್ಲೇ ಜಿಲ್ಲಾಡಳಿತವು, ನ್ಯಾಯಾಲಯದ ಆವರಣದಲ್ಲಿ ವಕೀಲರ ಸಂಘಕ್ಕೆ ಜಾಗವನ್ನ ನೀಡಿದೆ. ವಕೀಲರ ಸಂಘಕ್ಕೆ ನೀಡಿರುವ ಜಾಗದಲ್ಲಿ ಗಣಪತಿ ದೇವಾಲಯ ನಿರ್ಮಾಣಕ್ಕೆ ಚಿಕ್ಕಮಗಳೂರು ವಕೀಲರ ಸಂಘ ನಿರ್ಧಾರ ಮಾಡಿದೆ. ನಾವು ನಮಗೆ ನೀಡಿರುವ ಜಾಗದಲ್ಲಿ ನಾವು ಹಣ ಹಾಕಿ ದೇವಾಲಯ ಮಾಡಿದ್ರೆ ತಪ್ಪಾ ಎಂದು ಪ್ರಶ್ನೆ ಮಾಡಿದ್ದಾರೆ.
ಹೊಸ ಕೋರ್ಟ್ ಆವರಣದಲ್ಲಿ ಗಣಪತಿ ದೇವಾಲಯ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವವರ ವಿರುದ್ಧ ಚಿಕ್ಕಮಗಳೂರು ಜಿಲ್ಲಾ ವಕೀಲರ ಸಂಘ ಆಕ್ರೋಶ ವ್ಯಕ್ತಪಡಿಸಿದ್ದು, ರಾಜ್ಯದ ಬಹುತೇಕ ನ್ಯಾಯಾಲಯಗಳು ಗಣಪತಿ ದೇವಸ್ಥಾನವಿದೆ. ಹಾಗೆಯೇ ಚಿಕ್ಕಮಗಳೂರಿನ ಕೋರ್ಟ್ ನಲ್ಲಿಯೂ ಗಣಪತಿ ದೇವಸ್ಥಾನ ಇದೆ. ಚಿಕ್ಕಮಗಳೂರು ಕೋರ್ಟಿನ ಆವರಣದಲ್ಲಿರುವ ಗಣಪತಿಗೆ ಅದರದ್ದೇ ಆದ ಇತಿಹಾಸವಿದೆ. ಹೊಯ್ಸಳರ ಕಾಲದಲ್ಲಿ ಕೆತ್ತನೆ ಮಾಡಿದ ಗಣಪತಿ ವಿಗ್ರಹವಿದು. ಬೇರೆ ದೇಶಕ್ಕೆ ಕೊಂಡೊಯ್ಯುವ ಸಂದರ್ಭದಲ್ಲಿ ಮದ್ರಾಸ್ ಹಾರ್ಬರ್ ವಿಗ್ರಹ ಸಿಕ್ಕಿತ್ತು ಎಂದಿದ್ದಾರೆ.
ಗಣಪತಿ ವಿಗ್ರಹದ ಐತಿಹಾಸಿಕ ಹಿನ್ನೆಲೆಯನ್ನು ಚಿಕ್ಕಮಗಳೂರು ಜಿಲ್ಲಾ ವಕೀಲರ ಸಂಘ ಬಿಚ್ಚಿಟ್ಟಿದೆ. ಹೊಯ್ಸಳರ ಕಾಲದಲ್ಲಿ ಕೆತ್ತನೆ ಮಾಡಲಾದ ಗಣಪತಿ ವಿಗ್ರಹವು 1960ರ ದಶಕದಲ್ಲಿ ಕಳವಾಗಿದ್ದು, ಈ ಪ್ರಕರಣ 1970ರಲ್ಲಿ ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಿತ್ತು ಎಂದು ವಕೀಲರು ತಿಳಿಸಿದ್ದಾರೆ.
ಕೇಸ್ ಮುಕ್ತಾಯವಾದ ಬಳಿಕ ವಿಲೇವಾರಿಗೆ ಒಳಪಟ್ಟ ವಸ್ತುಗಳೊಂದಿಗೆ ಈ ವಿಗ್ರಹವನ್ನು ನ್ಯಾಯಾಲಯದಲ್ಲೇ ಉಳಿಸಿಕೊಳ್ಳಲಾಗಿದ್ದು, 1972ರಲ್ಲಿ ಅಂದಿನ ನ್ಯಾಯಾಧೀಶರು, ವಕೀಲರು ಹಾಗೂ ನ್ಯಾಯಾಲಯದ ಸಿಬ್ಬಂದಿ ಸೇರಿ ಪ್ರತಿಷ್ಠಾಪನೆ ಮಾಡಿದ್ದರು ಎನ್ನಲಾಗಿದೆ. ಹೊಸ ಕೋರ್ಟ್ ಕಟ್ಟಡ ನಿರ್ಮಾಣಗೊಂಡಿರುವ ಹಿನ್ನೆಲೆಯಲ್ಲಿ, ವಕೀಲರಿಗೆ ಮೀಸಲಾದ ಜಾಗದಲ್ಲಿ ಗಣಪತಿ ದೇವಸ್ಥಾನ ನಿರ್ಮಾಣ ಮಾಡುವುದರಲ್ಲಿ ತಪ್ಪಿಲ್ಲ ಎಂದು ವಕೀಲರ ಸಂಘ ವಾದಿಸಿದೆ.
ಈ ವಿಚಾರವಾಗಿ ಪರ-ವಿರೋಧ ಚರ್ಚೆ ತೀವ್ರಗೊಂಡಿದ್ದು, ನೂತನ ಕೋರ್ಟ್ ಆವರಣದಲ್ಲಿ ದೇವಾಲಯ ನಿರ್ಮಾಣದ ವಿವಾದ ಯಾವ ದಿಕ್ಕು ತಾಳಲಿದೆ ಎಂಬುದು ಕಾದು ನೋಡಬೇಕಿದೆ.












