ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಬಣಕಲ್ ಗ್ರಾಮದಿಂದ ಪ್ರವಾಸಿ ತಾಣ ದೇವರಮನೆಗೆ ಸಾಗುವ ರಸ್ತೆಯಲ್ಲಿ ಬೃಹತ್ ಕಂದಕ ನಿರ್ಮಾಣವಾಗಿದ್ದು ಶೀಘ್ರವಾಗಿ ದುರಸ್ತಿ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಗ್ರಾಮಸ್ಥರಾದ ಬಿ.ಎಸ್.ವಿಕ್ರಂ ಮಾತನಾಡಿ, ಬಹಳ ಹಳೆಯದಾದ ಸೇತುವೆಯು ಬಿರುಕು ಬಿಟ್ಟು ರಸ್ತೆಯಲ್ಲಿ ಕಂದಕ ನಿರ್ಮಾಣವಾಗಿದೆ. ಪ್ರವಾಸಿ ತಾಣ ದೇವರಮನೆಗೆ ಇದೇ ರಸ್ತೆಗೆ ಪ್ರಯಾಣಿಕರು ಸಾಗುತ್ತಿದ್ದು ಇದರಿಂದ ಸೇತುವೆಯ ರಸ್ತೆ ಮತ್ತಷ್ಟು ಶಿಥಿಲಗೊಳ್ಳುತ್ತಿದೆ. ರಸ್ತೆಯನ್ನು ಸಂಬಂಧಿಸಿದ ಅಧಿಕಾರಿಗಳು ಶೀಘ್ರ ದುರಸ್ತಿ ಮಾಡಿ ಸಂಪರ್ಕ ರಸ್ತೆಯನ್ನು ಉಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಮುಖಂಡ ಬಿ.ಸಿ ಪ್ರವೀಣ್ ಮಾತನಾಡಿ, ದೇವರಮನೆ ಧಾರ್ಮಿಕ ಕ್ಷೇತ್ರವಾಗಿದ್ದು ಈ ರಸ್ತೆಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಜನರು ಬರುತ್ತಿದ್ದಾರೆ. ಆದರೆ ಸೇತುವೆ ಬಾರಿ ಹಳೆಯ ಸೇತುವೆಯಾಗಿದ್ದು ಅದು ಈಗ ಶಿಥಿಲಗೊಂಡು ರಸ್ತೆಯ ಮೇಲೆ ಬೃಹತ್ ಕಂದಕ ನಿರ್ಮಾಣವಾಗಿದೆ. ಆದರೆ ರಸ್ತೆಯು ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವುದರಿಂದ ಗ್ರಾಮಸ್ಥರಿಗೂ ತೊಂದರೆಯಾಗಿದೆ.
ಈ ರಸ್ತೆಯಲ್ಲಿ ಸರಕು ತುಂಬಿದ ವಾಹನಗಳು, ಪ್ರವಾಸಿಗರ ವಾಹನಗಳು ತಿರುಗುತ್ತಿರುವುದರಿಂದ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ರಸ್ತೆ ಹಾಗೂ ಸೇತುವೆ ದುರಸ್ತಿಗೆ ಶಾಸಕಿ ನಯನಾ ಮೋಟಮ್ಮ ಅವರಿಂದಲೂ ಸಂಬಂಧಿಸಿದ ಅಧಿಕಾರಿಗಳಿಗೆ ಶಿಫಾರಸು ಪತ್ರವನ್ನು ನೀಡಲಾಗಿದೆ. ಆದರೆ ರಸ್ತೆ ದೇವರಮನೆ ದೇವಸ್ಥಾನಕ್ಕೆ ತೆರಳುವ ಪ್ರಮುಖ ರಸ್ತೆಯಾಗಿದ್ದು ಪ್ರವಾಸಿಗರ ವಾಹನಗಳು ಮಂಜು ಕವಿದ ವಾತಾವರಣ ಇರುವುದರಿಂದ ಇಲ್ಲಿ ಅಪಘಾತ ಸಂಭವಿಸಿ ಪ್ರಾಣಹಾನಿಯಾಗುವ ಸಾಧ್ಯತೆಗಳಿವೆ.
ಈಗ ರಸ್ತೆಗೆ ಕಾಮಗಾರಿಗೆ ಅನುದಾನ ಬರುವವರೆಗೂ ತಾತ್ಕಾಲಿಕ ರಸ್ತೆ ನಿರ್ಮಿಸಿ ಈ ಸೇತುವೆ ಮೇಲೆ ಸಂಚಾರ ಸ್ಥಗಿತಗೊಳಿಸುವುದರಿಂದ ಸಂಪರ್ಕ ಸೇತುವೆ ಉಳಿಯಲಿದೆ. ಹಾಗೂ ಈ ರಸ್ತೆಯಲ್ಲಿ ಘನ ಹಾಗೂ ಟೆಂಪೊ, ಮಿನಿ ಬಸ್ ಸಂಚಾರ ಸ್ಥಗಿತಗೊಳಿಸಿ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ವ್ಯವಸ್ಥೆ ಮಾಡಬೇಕು.
ಕೆಲವು ದಿನದ ಹಿಂದೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಬಂದು ಸ್ಥಳ ಪರಿಶೀಲನೆ ಮಾಡಿದ್ದಾರೆ. ಆದರೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ನೂತನ ಸೇತುವೆ ಆಗುವವರೆಗೂ ತಾತ್ಕಾಲಿಕ ರಸ್ತೆ ನಿರ್ಮಿಸಬೇಕೆಂದು ಆಗ್ರಹಿಸಿದ್ದಾರೆ. (ವರದಿ- ತನು ಕೊಟ್ಟಿಗೆಹಾರ)
ಚಿಕ್ಕಮಗಳೂರು: ಬ್ಯಾಂಕ್ ಸಿಬ್ಬಂದಿಗಳಿಂದಲೇ ಗ್ರಾಹಕರಿಗೆ ವಂಚನೆ
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಬ್ಯಾಂಕ್ ಸಿಬ್ಬಂದಿಗಳೇ ಗ್ರಾಹಕರಿಗೆ ವಂಚಿಸಿರುವ ಘಟನೆ ಚಿಕ್ಕಮಗಳೂರು ನಗರದ ಬೋಳರಾಮೇಶ್ವರ ದೇಗುಲ ಬಳಿ ಇರುವ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನಡೆದಿದೆ.
ಗ್ರಾಹಕರ ಚಿನ್ನವನ್ನು ಮಾರಾಟ ಮಾಡಿ ನಕಲಿ ಚಿನ್ನವನ್ನು ಬ್ಯಾಂಕ್ ಲಾಕರ್ ನಲ್ಲಿ ಇಟ್ಟಿದ್ದಾರೆ. ಬೆಂಗಳೂರು ಮುಖ್ಯ ಶಾಖೆ ಅಧಿಕಾರಿಗಳ ಪರಿಶೀಲನೆ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. 141 ಚಿನ್ನದ ಪ್ಯಾಕೆಟ್ ಗಳ ಪೈಕಿ 140 ಪ್ಯಾಕೆಟ್ ಗಳಲ್ಲಿ ನಕಲಿ ಚಿನ್ನ ಪತ್ತೆಯಾಗಿವೆ. ಬ್ಯಾಂಕ್ ಆಡಿಟ್ ನಲ್ಲಿ ಕೋಟ್ಯಂತರ ರೂ. ವಂಚನೆ ಮಾಡಿರುವುದು ಬಹಿರಂಗವಾಗಿದೆ.
ಗ್ರಾಹಕರ ಚಿನ್ನವನ್ನು ಮಾರಾಟ ಮಾಡಿರುವ ಸಿಬ್ಬಂದಿ:
ಆರೋಪಿಗಳು ಮೊದಲಯೇ ನಕಲಿ ಚಿನ್ನವನ್ನು ತಂದು ಇಟ್ಟುಕೊಂಡಿದ್ದರು. ಗ್ರಾಹಕರಿಂದ ಅಸಲಿ ಚಿನ್ನವನ್ನು ಪಡೆದು ಸಾಲ ನೀಡುತ್ತಿದ್ದರು. ಆದರೆ ಲಾಕರ್ ನಲ್ಲಿ ಇಡುವಾಗ ಅಸಲಿ ಚಿನ್ನದ ಬದಲು ನಕಲಿ ಚಿನ್ನವನ್ನು ಇಡುತ್ತಿದ್ದರು. ಬಳಿಕ ಅಸಲಿ ಚಿನ್ನವನ್ನು ಬೇರೆ ಕಡೆ ಮಾರುತ್ತಿದ್ದರು ಎನ್ನಲಾಗಿದೆ.
ಪತ್ನಿ ಹೆಸರಿನಲ್ಲಿ ನಕಲಿ ಚಿನ್ನವಿಟ್ಟು ಲಕ್ಷಾಂತರ ರೂಪಾಯಿ ಲೋನ್:
ಬ್ಯಾಂಕ್ ಮ್ಯಾನೇಜರ್ ಸಂದೀಪ್ ಮತ್ತು ಸಿಬ್ಬಂದಿ ನಾರಾಯಣಸ್ವಾಮಿ ಪತ್ನಿ ಹೆಸರಿನಲ್ಲಿ ವಂಚನೆ ಮಾಡಿದ್ದಾರೆ. ಮ್ಯಾನೇಜರ್ ಸಂದೀಪ್ ಪತ್ನಿ ಶ್ವೇತಾ ಹೆಸರಲಿನಲ್ಲಿ ನಕಲಿ ಚಿನ್ನವನ್ನು ಅಡವಿಟ್ಟು ಸಾಲ ಪಡೆದ್ದಿದ್ದನು. ಇದೇ ರೀತಿಯಾಗಿ ನಾರಾಯಣಸ್ವಾಮಿ ಕೂಡ ಪತ್ನಿ ಲಾವಣ್ಯ ಹೆಸರಿನಲ್ಲಿ ನಕಲಿ ಚಿನ್ನವನ್ನು ಅಡವಿಟ್ಟು 50 ಲಕ್ಷ ರೂ. ಸಾಲ ಪಡೆದಿದ್ದನು.
ಮ್ಯಾನೇಜರ್ ಸೇರಿದಂತೆ 5 ಜನರ ವಿರುದ್ಧ ಪ್ರಕರಣ ದಾಖಲು:
ಇನ್ನು ಬ್ಯಾಂಕ್ ಮ್ಯಾನೇಜರ್ ಸೇರಿದಂತೆ 5 ಜನರ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ಸಂದೀಪ್, ಪ್ರಶಾಂತ್, ನಾರಾಯಣಸ್ವಾಮಿ, ಶ್ವೇತಾ, ಲಾವಣ್ಯ ಎಸ್ಕೇಪ್ ಆಗಿದ್ದಾರೆ.












