ಎನ್. ಆರ್. ಪುರ : (ನ್ಯೂಸ್ ಮಲ್ನಾಡ್ ವರದಿ) ತೋಟದ ಗೋಡೋನ್‌ನಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಅಡಿಕೆ ಕಳ್ಳತನವಾಗಿರುವ ಘಟನೆ ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಬನ್ನೂರು ಗ್ರಾಮದ ಜಕ್ಕಣಕ್ಕಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಜಕ್ಕಣಕ್ಕಿಯ ಸರ್ವೆ ನಂ. 224ರ ತೋಟದ ಮಾಲೀಕರಾದ ಕೆ. ಪ್ರಸಾದ್ ಮೂರ್ತಿ ಅವರು ಪ್ರತಿವರ್ಷದಂತೆ ರೈತರಿಂದ ಹಸಿ ಅಡಿಕೆ ಖರೀದಿಸಿ ಸಂಸ್ಕರಿಸಿ ಗೋಡೋನ್‌ನಲ್ಲಿ ಸಂಗ್ರಹಿಸಿಟ್ಟಿದ್ದರು. ಏಪ್ರಿಲ್ 1ರಂದು ಗೋಡೋನ್ ಸ್ವಚ್ಛಗೊಳಿಸಿ ಬೀಗ ಹಾಕಲಾಗಿತ್ತು.

ಆದರೆ ಏಪ್ರಿಲ್ 3ರಂದು ಸಂಜೆ ಗೋಡೋನ್ ಬಾಗಿಲು ತೆರೆಯುವ ವೇಳೆ ಮೇಲ್ಭಾಗದ ಹೆಂಚುಗಳನ್ನು ತೆಗೆದಿರುವುದು ಗಮನಕ್ಕೆ ಬಂದಿದೆ. ಪರಿಶೀಲನೆ ನಡೆಸಿದಾಗ ಒಟ್ಟು 149 ಮೂಟೆಗಳ ಪೈಕಿ 70 ಕೆಜಿ ತೂಕದ 7 ಅಡಿಕೆ ಮೂಟೆಗಳು ನಾಪತ್ತೆಯಾಗಿರುವುದು ಪತ್ತೆಯಾಗಿದೆ.

ಕಳ್ಳರು ಗೋಡೋನ್ ಮೇಲ್ಭಾಗದ ಹೆಂಚುಗಳನ್ನು ತೆಗೆದು ಒಳನುಗ್ಗಿ, ಬಳಿಕ ಮುಂಭಾಗದ ಬಾಗಿಲಿನ ಮೂಲಕ ಅಡಿಕೆ ಮೂಟೆಗಳನ್ನು ಸಾಗಿಸಿರುವ ಶಂಕೆ ವ್ಯಕ್ತವಾಗಿದೆ.
ಕಳ್ಳತನವಾದ ಅಡಿಕೆಯ ಅಂದಾಜು ಮೌಲ್ಯ ₹2.50 ಲಕ್ಷ ಎಂದು ಹೇಳಲಾಗಿದ್ದು, ವೈಯಕ್ತಿಕ ಕಾರಣಗಳಿಂದ ತಡವಾಗಿ ನೀಡಲಾದ ದೂರಿನ ಮೇರೆಗೆ ಬಾಳೆಹೊನ್ನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಳ್ಳರ ಪತ್ತೆಗೆ ಜಾಲ ಬೀಸಿದ್ದಾರೆ.













