ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ಲೋಕಾಯುಕ್ತ ಅಧಿಕಾರಿಗಳು ಶನಿವಾರ ಹೊಸನಗರ, ಸಾಗರ, ತೀರ್ಥಹಳ್ಳಿ, ಭದ್ರಾವತಿ, ಶಿವಮೊಗ್ಗ ತಾಲೂಕಿನಲ್ಲಿರುವ ಮರಳು ಕ್ವಾರಿಗಳ ಮೇಲೆ ದಾಳಿ ನಡೆಸಿ 50 ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
ಲೋಕಾಯುಕ್ತ ನ್ಯಾಯಮೂರ್ತಿಗಳು ಮರಳು ಮಾಫಿಯಾದ ವಿರುದ್ಧ ಸರ್ಚ್ ವಾರೆಂಟ್ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ಶಿವಮೊಗ್ಗ ಲೋಕಾಯುಕ್ತ ಡಿವೈಎಸ್‌ಪಿ ಚಂದ್ರಶೇಖರ್ ನೇತೃತ್ವದಲ್ಲಿ 15 ಲೋಕಾ ಅಧಿಕಾರಿಗಳ ತಂಡ 25 ಸ್ಥಳಗಳಲ್ಲಿ ದಾಳಿ ನಡೆಸಿ ಅಕ್ರಮ ಮರಳು ಗಣಿಗಾರಿಕೆ ಪತ್ತೆ ಹಚ್ಚಿದೆ. ಭದ್ರಾವತಿಯ ನಿಂಬೆಗೊಂದಿ, ಮಂಗೋಟೆ, ಸನ್ಯಾಸಿ ಕೊಡಮಗ್ಗಿಯಲ್ಲಿಯೂ ದಾಳಿ ಮಾಡಲಾಗಿದೆ.

ಶಿವಮೊಗ್ಗದ ಹಾಡೋನಹಳ್ಳಿ, ಕೂಡಲಿ ಮತ್ತು ತೀರ್ಥಹಳ್ಳಿ ತಾಲೂಕಿನ ಮಂಡುವಳ್ಳಿ, ತೂದೂರು, ದಬ್ಬಣಗದ್ದೆ ಕ್ವಾರಿ ಮೇಲೆ ದಾಳಿ ನಡೆಸಿದ್ದಾರೆ. ಹೊಸನಗರ ತಾಲೂಕಿನ ಸುತ್ತಾ, ಹರಿದ್ರಾವತಿ, ಸಂಪೆಕಟ್ಟೆ ಮೊದಲಾದ ಕಡೆ ದಾಳಿ ನಡೆಸಲಾಗಿದೆ. ಕುವೆಂಪು ನಗರದಲ್ಲಿರುವ ಗಣಿ ಮತ್ತು ಭೂವಿಜ್ಞಾನ ಇಲಾಖೆ ಕಚೇರಿ ಮೇಲೆ ದಾಳಿ ಮಾಡಿ, ದಾಖಲೆ ಪರಿಶೀಲನೆ ನಡೆಸಿದ್ದಾರೆ.

















