ಎನ್.ಆರ್ ಪುರ: (ನ್ಯೂಸ್ ಮಲ್ನಾಡ್ ವರದಿ) ನೆರೆಯ ರಾಜ್ಯ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತ ಹಾಗೂ ಉತ್ತರ ಕನ್ನಡ ಜಿಲ್ಲೆಯ ಗುಡ್ಡ ಕುಸಿತದ ಬಳಿಕ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿತ್ತು. ಈ ಆದೇಶಕ್ಕೆ ಮಲೆನಾಡಿಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.

ಗುಡ್ಡ ಕುಸಿತ ಹಾಗೂ ಭೂಕುಸಿತಕ್ಕೆ ಮೂಲ ಕಾರಣ ಮರಗಳ ಕಡಿತಲೆ, ಜೊತೆಗೆ ಅವೈಜ್ಞಾನಿಕವಾಗಿ ಗುಡ್ಡ ಕತ್ತರಿಸಿ ನಿರ್ಮಿಸುವ ರಸ್ತೆಗಳಿಂದ ಎಂದು ಅನಧಿಕೃತವಾಗಿ ಮತ್ತು ಅರಣ್ಯ ಪ್ರದೇಶ ಒತ್ತುವರಿಯನ್ನು ತೆರವುಗೊಳಿಸಲು ಅರಣ್ಯ ಖಾತೆ ಸಚಿವ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದ್ದರು. ಈ ಸೂಚನೆಯಿಂದ ಈಗಾಗಲೇ ಮಲೆನಾಡು ಭಾಗದ ಹಲವೆಡೆ ಒತ್ತುವರಿ ತೆರವುಗೊಳಿಸಿದ್ದಾರೆ. ಈ ಹಿನ್ನೆಲೆ ಇದೀಗ ವಿವಿಧ ಸಂಘ ಸಂಸ್ಥೆಗಳು ಹೋರಾಟಕ್ಕೆ ಇಳಿದಿದ್ದು, ವಿವಿಧ ಸಂಘ ಸಂಸ್ಥೆಗಳ ಜೊತೆ ಬಿಜೆಪಿ ಮತ್ತು ಜೆಡಿಎಸ್ ಸಾಥ್ ನೀಡಿದೆ.
ಬಿಜೆಪಿ ಹಾಗೂ ಜೆಡಿಎಸ್ ಪಕ್ಷ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಚಿವ ಜೀವರಾಜ್, ಶೃಂಗೇರಿ ಕ್ಷೇತ್ರದಲ್ಲಿ ಸರ್ಕಾರ ಯಾವುದೇ ರೈತರ ಜಮೀನು ತೆರವುಗೊಳಿಸಲು ಹೊರಟರೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರು ಒಟ್ಟಾಗಿ ತಡೆಯಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ. ಮಲೆನಾಡು ಭಾಗದ ರೈತರ ಒತ್ತುವರಿ ಜಮೀನು ತೆರವು ಮಾಡಿಸಲು ಕಂದಾಯ ಇಲಾಖೆ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಇಡೀ ದೇಶಕ್ಕೆ ಅನ್ನ ನೀಡುವ ರೈತರ ಮೇಲೆ ಸರ್ಕಾರ ಗದಾ ಪ್ರಹಾರ ಮಾಡಿದೆ ಎಂದು ಟೀಕಿಸಿದರು.
ಇದನ್ನೂ ಓದಿ: ಈರುಳ್ಳಿ ಮೇಲೆ ಕಪ್ಪು ಬಣ್ಣ ಇದ್ದರೆ ತಿನ್ನಬೇಕಾ ಬೇಡ್ವಾ..?; ನಿಮ್ಮ ಗೊಂದಲಕ್ಕೆ ಇಲ್ಲಿದೆ ಉತ್ತರ
ರೈತರಿಂದ ಅರಣ್ಯ ರಕ್ಷಣೆ:
ರೈತರ ಒತ್ತುವರಿಯಿಂದ ಗುಡ್ಡ ಕುಸಿತ ಕಂಡಿಲ್ಲ. ನಮ್ಮ ರೈತರು ಅರಣ್ಯ ಕಾಪಾಡಿಕೊಂಡು ಬಂದಿದ್ದಾರೆ. ಇದರಿಂದ ಮರಗಳ ಬೇರು ಮಣ್ಣು ಜರಿಯದಂತೆ ತಡೆಯುತ್ತಿದೆ. ಸರ್ಕಾರದ ಅವೈಜ್ಞಾನಿಕ ಕಾರಣದಿಂದಲೇ ಗುಡ್ಡ ಕುಸಿದಿವೆ. ಗುಡ್ಡಗಳಲ್ಲಿ ಇಂಗು ಗುಂಡಿ ಮಾಡುವುದು, ಗುಡ್ಡ ಸುತ್ತ ಟ್ರಂಚ್ ಹೊಡೆಯುವುದರಿಂದಲೂ ಸಹಜವಾಗಿ ಒಂದು ಮಾರ್ಗದಲ್ಲಿ ಹೋಗುತ್ತಿದ್ದ ಗುಡ್ಡದ ನೀರು ಬೇರೆ ಮಾರ್ಗದಲ್ಲಿ ಹೋಗುವ ಕಾರಣದಿಂದಲೂ ಗುಡ್ಡ ಕುಸಿಯುತ್ತಿದೆ. ಕೊಪ್ಪ ತಾಲೂಕಿನ ಕುಂಚೂರು ರಸ್ತೆ ಪಕ್ಕದಲ್ಲಿ ಗುಡ್ಡ ಕುಸಿದಿದೆ. ಇದಕ್ಕೆ ಕಾರಣ ರಸ್ತೆ ಬದಿ ಓಎಫ್ ಸಿ ಗಾಗಿ ಕಾಲುವೆ ತೆಗೆಯಲಾಗಿದೆ. ಇದನ್ನೂ ಸರಿಯಾಗಿ ಮುಚ್ಚಿಲ್ಲ. ಇದರ ಜೊತೆಗೆ ಜಲ ಜೀವನ್ ಮಿಷನ್ ಯೋಜನೆಯಡಿ ಕಾಲುವೆ ತೆಗೆದಿದ್ದಾರೆ. ಅದನ್ನು ಮುಚ್ಚಿಲ್ಲ. ಈ ಕಾರಣಕ್ಕೆ ಅಲ್ಲಿ ಗುಡ್ಡ ಕುಸಿದಿದೆ. ಇನ್ನು ಹೊಸ ಒತ್ತುವರಿ ಬೆಂಬಲಿಸಲ್ಲ ರೈತರು ನೂರಾರು ವರ್ಷದಿಂದ ಒತ್ತುವರಿ ಮಾಡಿ ಜೀವನ ನಡೆಸುತ್ತಿದ್ದಾರೆ. ಅಂತವರ ಜಮೀನು ತೆರವು ಮಾಡುವುದನ್ನು ವಿರೋಧಿಸುತ್ತೇವೆ ಎಂದರು.
ಇದನ್ನೂ ಓದಿ: ಜಮೀನಿನ ದಾರಿಗೆ ಸರ್ಕಾರದಿಂದ ಬಂತು ಹೊಸ ರೂಲ್ಸ್!; ಏನದು? ಇಲ್ಲಿದೆ ನೋಡಿ
ರೈತರನ್ನು ಕೈ ಬಿಡುವ ಪ್ರಶ್ನೆಯೇ ಇಲ್ಲ ಕಾನೂನು ಉಲ್ಲಂಘನೆಗೂ ಸಿದ್ದ:
ಅರಣ್ಯ ಸಚಿವರ ಆದೇಶ ಮಲೆನಾಡಿನ ರೈತರಲ್ಲಿ ಅನ್ನ ಕಸಿಯುವ ಆತಂಕ ಸೃಷ್ಟಿಯಾಗಿದೆ. ಆದರೆ, ಈಗ ರೈತರನ್ನು ಕೈ ಬಿಡುವ ಪ್ರಶ್ನೆ ಇಲ್ಲ. ಕಾನೂನು ಉಲ್ಲಂಘನೆಗೂ ಸಿದ್ದ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದ್ದಾರೆ.
2015 ರ ನಂತರ ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ರೈತರನ್ನು ತೆರವುಗೊಳಿಸಲಾಗುತ್ತದೆ ಎಂಬ ಅರಣ್ಯ ಸಚಿವರ ಸೂಚನೆ ಹಾಗೂ ಇತ್ತೀಚೆಗೆ ವಯನಾಡು ಮತ್ತು ಕೆಲವೆಡೆ ಗುಡ್ಡ ಕುಸಿತದ ಘಟನೆಯ ನಂತರ ಅದೇ ನೆಪವೊಡ್ಡಿ ಅರಣ್ಯ ಇಲಾಖೆಯ ಅಧಿಕಾರಿಗಳು ಹಲವು ವರ್ಷಗಳ ಸಾಗುವಳಿ ದಾಖಲೆ ಇದ್ದರೂ ಸಹ ಏಕಾಏಕಿ ಬಗರ್ ಹುಕುಂ ಸಾಗುವಳಿದಾರರನ್ನು ಬಲತ್ಕಾರವಾಗಿ ಒಕ್ಕಲೆಬ್ಬಿಸುತ್ತಿರುವುದು ರೈತರಲ್ಲಿ ಆತಂಕ ಮೂಡಿಸಿದೆ. ಆದರೆ ಬಗರ್ ಹುಕುಂ ಸಾಗುವಳಿ ಶ್ರಮಜೀವಿಗಳ ಅನ್ನ ಕಸಿಯಲು ಬಿಜೆಪಿ ಬಿಡಲ್ಲ. ಬದುಕು ಕಟ್ಟಿಕೊಳ್ಳಲು ಮಾಡಿರುವ ಸಾಗುವಳಿ ತೆರವಿಗೆ ಬಂದರೆ ಅಡ್ಡ ತಡೆಯುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಆಸ್ತಿ ಮಾಲೀಕರಿಗೆ ರಾಜ್ಯ ಸರ್ಕಾರದಿಂದ ಹೊಸ ಆದೇಶ; ಈ ಕೆಲಸ ಮಾಡಲು ಡೆಡ್ ಲೈನ್ ಫಿಕ್ಸ್ ಮಾಡಿದ ಸರ್ಕಾರ; ಏನದು? ಇಲ್ಲಿದೆ ನೋಡಿ












