
ಕೊಟ್ಟಿಗೆಹಾರ: (ನ್ಯೂಸ್ ಮಲ್ನಾಡ್ ವರದಿ) ಮೂಡಿಗೆರೆ ತಾಲ್ಲೂಕಿನ ವಾಟೆಕಾನ್ ಗ್ರಾಮದಲ್ಲಿ ನಿರ್ಮಿಸಿದ ಕಾಂಕ್ರೀಟ್ ರಸ್ತೆ ಮಳೆ ಬಿದ್ದಾಗಲೆಲ್ಲಾ ನೀರಿನಲ್ಲಿ ಮುಳುಗಿ ಸಂಚಾರಕ್ಕೆ ಅಡಚಣೆ ಉಂಟುಮಾಡುತ್ತಿದೆ. ಬಾಕ್ಸ್ ಚರಂಡಿ ವ್ಯವಸ್ಥೆ ಇಲ್ಲದಿರುವುದೇ ಈ ತೊಂದರೆಗೆ ಕಾರಣವೆಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಪಂಚಾಯಿತಿಯಲ್ಲೇ ಸಿಗಲಿವೆ ಜನನ-ಮರಣ ಪ್ರಮಾಣ ಪತ್ರ

ಮಳೆ ಬಂದ ತಕ್ಷಣ ರಸ್ತೆ ಮೇಲೆ ನೀರು ನಿಂತು ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ಸಂಚಾರ ಕಷ್ಟವಾಗುತ್ತಿದೆ. ನೀರಿನ ಹರಿವು ನಿಯಂತ್ರಣವಿಲ್ಲದೆ ಮನೆಗಳ ಮುಂದೆ ಸೇರುತ್ತಿದೆ. ಸ್ಥಳೀಯರು ಈ ಸಮಸ್ಯೆಯನ್ನು ಹಲವು ಬಾರಿ ನಿಡುವಾಳೆ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ, ಇಂದಿಗೂ ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಜನರಲ್ಲಿ ಆಕ್ರೋಶ ವ್ಯಕ್ತವಾಗಿದೆ.

“ಚರಂಡಿ ನಿರ್ಮಾಣ ಮಾಡಿದರೆ ಸಮಸ್ಯೆ ಶಾಶ್ವತವಾಗಿ ಪರಿಹಾರವಾಗುತ್ತದೆ. ಆದರೆ, ಅಧಿಕಾರಿಗಳು ಕಿವಿಗೊಡುತ್ತಿಲ್ಲ,” ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. (ವರದಿ- ತನು ಕೊಟ್ಟಿಗೆಹಾರ)
ಇದನ್ನೂ ಓದಿ: ಗೃಹಲಕ್ಷ್ಮಿ ಸಹಕಾರ ಸಂಘ ಸ್ಥಾಪನೆಗೆ ಅನುಮತಿ













