ಬಾಳೆಹೊನ್ನೂರು: ಅರಣ್ಯ ಇಲಾಖೆ ಅಧಿಕಾರಿ ಮನೆ ಮುಂದೆ ವಾಮಾಚಾರ..?

ಎನ್. ಆರ್. ಪುರ: (ನ್ಯೂಸ್ ಮಲ್ನಾಡ್ ವರದಿ) ತಾಲೂಕಿನ ಬಾಳೆಹೊನ್ನೂರಿನಲ್ಲಿ ಭೀತಿ ಹುಟ್ಟಿಸುವ ಘಟನೆಯೊಂದು ನಡೆದಿದ್ದು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ACF) ಅವರ ಮನೆ ಮುಂದೆಯೇ ವಾಮಾಚಾರ ಮಾಡಲಾಗಿದೆ.

ಎಸಿಎಫ್ ಮೋಹನ್ ಮತ್ತು ಅವರ ಜೀಪ್ ಚಾಲಕನನ್ನು ಗುರಿಯಾಗಿಸಿಕೊಂಡು ಈ ಕೃತ್ಯ ಎಸಗಲಾಗಿದ್ದು, ಅರಣ್ಯ ಇಲಾಖೆಯ ವಲಯದಲ್ಲಿ ಸಂಚಲನ ಮೂಡಿಸಿದೆ.

ಎಸಿಎಫ್ ಮೋಹನ್ ಅವರ ಮನೆಯ ಗೇಟ್ ಬಳಿ ಅನಾಮಧೇಯ ವ್ಯಕ್ತಿಗಳು ವಾಮಾಚಾರ ನಡೆಸಿದ್ದಾರೆ. ಅಧಿಕಾರಿ ಮೋಹನ್ ಹಾಗೂ ಅವರ ಜೀಪ್ ಚಾಲಕನ ಫೋಟೋಗಳನ್ನು ಮಣ್ಣಿನ ಮಡಕೆಯೊಳಗೆ ಇಟ್ಟು, ಅರಿಶಿನ-ಕುಂಕುಮ ಎರಚಿ ಮಡಕೆಯನ್ನು ಒಡೆದು ಹಾಕಲಾಗಿದೆ. ಬೆಳಿಗ್ಗೆ ಅಧಿಕಾರಿಗಳು ಮನೆ ಹೊರಬಂದಾಗ ಈ ದೃಶ್ಯ ಕಂಡುಬಂದಿದ್ದು, ಇಡೀ ಕುಟುಂಬ ಆತಂಕಕ್ಕೊಳಗಾಗಿದೆ.

ಈ ವಾಮಾಚಾರದ ಹಿಂದೆ ಕಚೇರಿಯ ಸಿಬ್ಬಂದಿಯೇ ಇರುವ ಸಾಧ್ಯತೆಯಿದೆ ಎಂದು ಎಸಿಎಫ್ ಮೋಹನ್ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಅವರು ಬಾಳೆಹೊನ್ನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಇಲಾಖೆಯೊಳಗಿನ ವೈಷಮ್ಯ ಅಥವಾ ವರ್ಗಾವಣೆ ವಿಚಾರವಾಗಿ ಈ ಕೃತ್ಯ ನಡೆದಿರಬಹುದು ಎಂದು ಶಂಕಿಸಲಾಗಿದೆ.

ಎಸಿಎಫ್ ನೀಡಿದ ದೂರಿನನ್ವಯ ಬಾಳೆಹೊನ್ನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವಾಮಾಚಾರ ಮಾಡಿದ ಕಿಡಿಗೇಡಿಗಳ ಪತ್ತೆಗೆ ತನಿಖೆ ಆರಂಭಿಸಿದ್ದಾರೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.