ಚಿಕ್ಕಮಗಳೂರು: ಬಾತುಕೋಳಿ ಹಿಡಿಯಲು ಹೋಗಿ 4 ಮಂದಿ ಬಾಲಕರು ಮೃತ್ಯು

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಆಟವಾಡುತ್ತಾ ಬಾತುಕೋಳಿ ಹಿಡಿಯುವುದಕ್ಕೆ ಹೋದ ನಾಲ್ವರು ಮಕ್ಕಳು ಕೆರೆಯಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ಚಿಕ್ಕಮಗಳೂರು ತಾಲೂಕಿನ ಅರಳುಗುಪ್ಪೆ ಗ್ರಾಮದ ಕಾರಂಜಿ ಕೆರೆಯಲ್ಲಿ ಸೋಮವಾರ ನಡೆದಿದೆ.

ಅರಳುಗುಪ್ಪೆ ಗ್ರಾಮದ ಅಬ್ದುಲ್ ರೆಹಮಾನ್ (13), ನಾಯಜ್ (12), ಶಿವಮೊಗ್ಗದ ಮೈದಿಹಾ (9), ಅರಮಾನ್ (8) ಮೃತಪಟ್ಟ ಮಕ್ಕಳು.

ಅರಳುಗುಪ್ಪೆಯ 4 ವರ್ಷದ ಅರ್ಮನ್ ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆಗಾಗಿ ಚಿಕ್ಕಮಗಳೂರಿನ ಮಲ್ಲೇಗೌಡ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಕಾರಂಜಿ ಕೆರೆ ಮಧ್ಯ ಭಾಗದಲ್ಲಿ ಮಾತ್ರ ನೀರಿದ್ದು, ಕೆರೆ ಪಾತ್ರದಲ್ಲಿ ಈ ಮಕ್ಕಳು ಆಟವಾಡುವಾಗ ಈ ದುರ್ಘಟನೆ ನಡೆದಿದೆ. ಆಟವಾಡುತ್ತಿರುವಾಗ ತಮ್ಮೊಂದಿಗಿದ್ದ ಬಾತುಕೋಳಿ ನೀರಿಗಿಳಿದಿದೆ ಎಂದು ಅದನ್ನು ಹಿಡಿಯಲು ಹೋದ ಬಾಲಕಿ ನೀರಿಗೆ ಬಿದ್ದಿದ್ದಾಳೆ. ಈ ಬಾಲಕಿಯನ್ನು ರಕ್ಷಿಸಲು ಹೋದ ಒಬ್ಬರ ಹಿಂದೊಬ್ಬರಂತೆ ಮಕ್ಕಳು ನೀರಿಗಿಳಿದು ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಶಾಸಕ ಎಚ್.ಡಿ.ತಮ್ಮಯ್ಯ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿರುವ ಮಗುವಿನ ಆರೋಗ್ಯ ವಿಚಾರಿಸಿದ್ದು, ಮೃತ ಮಕ್ಕಳ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

ಈ ವೇಳೆ ಮಾತನಾಡಿದ ಅವರು, ಇಂತಹ ಘಟನೆಗಳು ನಡೆಯಬಾರದು. ಮೃತ ಮಕ್ಕಳ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಲು ಕ್ರಮ ಕೈಗೊಳ್ಳುತ್ತೇವೆ. ಎಷ್ಟೇ ಪರಿಹಾರ ನೀಡಬಹುದು. ಆದರೆ ಮಕ್ಕಳನ್ನು ಮರಳಿ ಕೊಡಲು ಸಾಧ್ಯವಿಲ್ಲ. ಮುಂದೆ ಈ ರೀತಿ ಘಟನೆಗಳು ನಡೆಯದಂತೆ ಎಚ್ಚರ ವಹಿಸಲು ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿದ್ದೇನೆ ಎಂದು ಹೇಳಿದ್ದಾರೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.