ಕೊಪ್ಪದಲ್ಲಿ ಪೊಲೀಸರ ಮಿಂಚಿನ ಕಾರ್ಯಾಚರಣೆ: ಗೋಕಳ್ಳತನ ಪ್ರಕರಣದ ಪ್ರಮುಖ ಆರೋಪಿ ಬಂಧನ

ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗೋಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಜುಲೈ 6, 2026ರಂದು ಕೊಪ್ಪ ಪೊಲೀಸ್ ಠಾಣೆಯ ಪಿಎಸ್ಐ ಮಧು ಅವರು ಗಡಿಕಲ್ ಮುಖ್ಯ ರಸ್ತೆಯ ಬಳಿ ರೌಂಡ್ಸ್ ಕರ್ತವ್ಯದಲ್ಲಿದ್ದರು. ಬೆಳಗಿನ ಜಾವ ಸುಮಾರು 3 ಗಂಟೆಗೆ ಗಡಿಕಲ್ ಚೆಕ್‌ಪೋಸ್ಟ್ ಬಳಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ತೀರ್ಥಹಳ್ಳಿ ಕಡೆಯಿಂದ ಬಂದ ಇನ್ನೋವಾ ಕಾರನ್ನು ನಿಲ್ಲಿಸಲು ಸೂಚಿಸಲಾಗಿತ್ತು. ಆದರೆ ಕಾರಿನ ಚಾಲಕ ಕಾರನ್ನು ನಿಲ್ಲಿಸದೆ ಅತಿ ವೇಗವಾಗಿ ಪರಾರಿಯಾಗಿದ್ದಾನೆ.

ಅನುಮಾನಗೊಂಡ ಪಿಎಸ್ಐ ಮಧು ಅವರು ಸಿಬ್ಬಂದಿಗಳೊಂದಿಗೆ ಇಲಾಖೆಯ ಜೀಪಿನಲ್ಲಿ ಕಾರನ್ನು ಸುಮಾರು ಒಂದು ಕಿಲೋಮೀಟರ್‌ವರೆಗೆ ಹಿಂಬಾಲಿಸಿದ್ದಾರೆ. ದೋರಗಲ್ ರಸ್ತೆ ಬಳಿ ಕಾರು ನಿಯಂತ್ರಣ ತಪ್ಪಿ ಒಂದು ಚಕ್ರ ಚರಂಡಿಗೆ ಬಿದ್ದಿದೆ. ಕಾರಿನಲ್ಲಿದ್ದ ಮೂವರು ವ್ಯಕ್ತಿಗಳನ್ನು ಪೊಲೀಸರು ಹಿಡಿಯಲು ಮುಂದಾದಾಗ ಕತ್ತಲಿನಲ್ಲೇ ಅವರು ಪರಾರಿಯಾಗಿದ್ದಾರೆ.

ನಂತರ ಕಾರನ್ನು ಪರಿಶೀಲಿಸಿದಾಗ, ಎರಡು ದನಗಳನ್ನು ಕಾಲು ಮತ್ತು ಕುತ್ತಿಗೆಗೆ ಹಗ್ಗ ಕಟ್ಟಿ ಹಿಂಸಾತ್ಮಕವಾಗಿ ಕಾರಿನೊಳಗೆ ತುಂಬಿಸಿರುವುದು ಪತ್ತೆಯಾಗಿದೆ. ದನಗಳನ್ನು ಕಳ್ಳತನ ಮಾಡಿ ಮಾಂಸ ಮಾಡುವ ಉದ್ದೇಶದಿಂದ ಸಾಗಿಸಲಾಗುತ್ತಿತ್ತು ಎಂದು ಪೊಲೀಸರು ಶಂಕಿಸಿದ್ದಾರೆ.

ಈ ಕುರಿತು ಜುಲೈ 7ರಂದು ಬೆಳಗಿನ ಜಾವ 4:30ಕ್ಕೆ ಪ್ರಕರಣ ದಾಖಲಿಸಿ ಆರೋಪಿಗಳ ಪತ್ತೆಗೆ ತನಿಖೆ ಆರಂಭಿಸಲಾಗಿತ್ತು.

ತನಿಖೆ ಮುಂದುವರಿಸಿದ ಪೊಲೀಸರು ಆಗಸ್ಟ್ 25ರಂದು ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸೈಯದ್ ಇಮ್ರಾನ್ ಅಲಿಯಾಸ್ ಅಕ್ಲಾ, ಸೈಯದ್ ರಫೀಕ್ ಅವರ ಪುತ್ರ, 30 ವರ್ಷ, ಟಿಪ್ಪು ನಗರ, ಶಿವಮೊಗ್ಗ ಜಿಲ್ಲೆ ಎಂಬಾತನನ್ನು ಬಂಧಿಸಿದ್ದಾರೆ. ವಿಚಾರಣೆ ಪೂರ್ಣಗೊಳಿಸಿದ ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಸೆಪ್ಟೆಂಬರ್ 5, 2026ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಪ್ರಕರಣದ ಇತರೆ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.