ಎನ್.ಆರ್. ಪುರ: (ನ್ಯೂಸ್ ಮಲ್ನಾಡ್ ವರದಿ) ದೇವಸ್ಥಾನದ ಹೆಸರಿನಲ್ಲಿ ಮಹಿಳೆಯರನ್ನು ಕರೆಸಿ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿ ಪ್ರಶ್ನಿಸಿದ ವ್ಯಕ್ತಿಗೆ ಅವಾಚ್ಯವಾಗಿ ನಿಂದಿಸಿ ಕೊಲೆ ಬೆದರಿಕೆ ಹಾಕಿರುವ ಕುರಿತು ನರಸಿಂಹರಾಜಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಸೀತೂರು ಗ್ರಾಮದ ಮೇಕನಹಡ್ಲುವಿನ ಸತೀಶ್ ಪಾತ್ರಿ ಎಂಬಾತ ಕಳೆದ ಕೆಲವು ವರ್ಷಗಳಿಂದ ದೇವಸ್ಥಾನಕ್ಕೆ ಮಹಿಳೆಯರನ್ನು ಕರೆಸಿ ದೆವ್ವ ಬಿಡಿಸುವುದು, ಪದೇ ಪದೇ ದೇವಸ್ಥಾನಕ್ಕೆ ಬರುವಂತೆ ಒತ್ತಾಯಿಸುವುದು ಹಾಗೂ ಬರದಿದ್ದರೆ ಮಾಟ ಮಾಡಿಸಿ ಕುಟುಂಬವನ್ನು ಹಾಳು ಮಾಡುವುದಾಗಿ ಬೆದರಿಸುತ್ತಿದ್ದಾನೆ. ಇದಲ್ಲದೆ, ಕೋಳಿಯನ್ನು ಹಿಂಸಾತ್ಮಕವಾಗಿ ಹಿಡಿದು ಅದರ ರಕ್ತ ಕುಡಿಯುವಂತೆ ಒತ್ತಾಯಿಸಿರುವ ದೃಶ್ಯಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಈ ಬಗ್ಗೆ ಗ್ರಾಮದವರು ಪ್ರಶ್ನಿಸಿದ ಸಂದರ್ಭದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಮತ್ತೊಮ್ಮೆ ತಮ್ಮ ವಿರುದ್ಧ ಪ್ರಶ್ನಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಸತೀಶ್ ಪಾತ್ರಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಧರ್ಮ ನಾಯ್ಕ್ ಎಂಬುವವರು ನರಸಿಂಹರಾಜಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

ಯಾವೆಲ್ಲಾ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿವೆ?
ಈ ಪ್ರಕರಣದಲ್ಲಿ BNS ಕಲಂ 354, 352, 351(2) ಹಾಗೂ Prevention of Cruelty to Animals Act, Section 11(1)(d) ಮತ್ತು Karnataka Prevention and Eradication of Inhuman Evil Practices and Black Magic Act, 2017, Section 3(1)(2) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. BNS ಕಲಂ 354 ಮಹಿಳೆಯ ಗೌರವಕ್ಕೆ ಧಕ್ಕೆ ಉಂಟುಮಾಡುವ ಕೃತ್ಯಕ್ಕೆ, ಕಲಂ 352 ಉದ್ದೇಶಪೂರ್ವಕ ಅವಮಾನಕ್ಕೆ, ಕಲಂ 351(2) ಬೆದರಿಕೆಗೆ, Section 11(1)(d) ಪ್ರಾಣಿಗಳಿಗೆ ಅನಗತ್ಯ ನೋವು ಅಥವಾ ಸಂಕಟ ಉಂಟುಮಾಡುವ ಕೃತ್ಯಕ್ಕೆ ಹಾಗೂ Section 3(1)(2) ನಿಷೇಧಿತ ಅಮಾನವೀಯ ಆಚರಣೆಗಳು ಮತ್ತು ಮಾಟಮಂತ್ರ ಸಂಬಂಧಿತ ಕೃತ್ಯಗಳಿಗೆ ಸಂಬಂಧಿಸಿವೆ.
ನ್ಯೂಸ್ ಮಲ್ನಾಡ್ ವರದಿಗೆ ವ್ಯಾಪಕ ಶ್ಲಾಘನೆ
ಸತೀಶ್ ಪಾತ್ರಿ ಕುರಿತಂತೆ ನ್ಯೂಸ್ ಮಲ್ನಾಡ್ ದಾಖಲೆ ಸಮೇತ ನಿರಂತರ ವರದಿ ಮಾಡಿತ್ತು. ಕಳೆದ ಅನೇಕ ವರ್ಷದಿಂದ ಬಡವರಿಂದ ವಶೀಕರಣ, ಮಾಟ ಮಂತ್ರದ ಹೆಸರಲ್ಲಿ ಲಕ್ಷಾಂತರ ಹಣ ಪೀಕಿದ್ದ. ಹೊಕ್ಕಳಲ್ಲಿ ದೀಪ ಇಟ್ಟು ಮದ್ದು ಹಾಕಿದ್ದನ್ನು ತೆಗೆಯುತ್ತೇನೆ ಎನ್ನುವ ನೆಪದಲ್ಲಿ ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸೋದು. ವಿವಾಹಿತ ಮಹಿಳೆಯರಿಗೆ ಆಡಿಯೋ ಸಂದೇಶ ಕಳಿಸುವುದು.. ತುಳುನಾಡಿನ ದೈವಾರಾಧನೆಗೆ ತದ್ವಿರುದ್ಧವಾಗಿ ಕೋಲ, ನೇಮೋತ್ಸವ ಹಾಗೂ ನಾಗಾರಾಧನೆ ಮಾಡುವುದು. ಯುವತಿಗೆ ಚಿತ್ರಹಿಂಸೆ ನೀಡಿ ಜೀವಂತ ಕೋಳಿಯ ರಕ್ತ ಕುಡಿಯುವಂತೆ ಬೆದರಿಕೆ ಹಾಕೋದು ಮಾಡುತ್ತಿದ್ದ. ಈ ಕುರಿತು ನ್ಯೂಸ್ ಮಲ್ನಾಡ್ ಸಾಕ್ಷಿ ಸಮೇತ ವರದಿ ಮಾಡಿತ್ತು. ನ್ಯೂಸ್ ಮಲ್ನಾಡ್ ಮಾಡಿದ ವರದಿಗೆ ಇಡೀ ಮಲೆನಾಡಿನಾದ್ಯಂತ ವ್ಯಾಪಕ ಶ್ಲಾಘನೆ ವ್ಯಕ್ತವಾಗಿತ್ತು.. ನ್ಯೂಸ್ ಮಲ್ನಾಡ್ ವರದಿ ಮಾಡಿದ ಬಳಿಕ ಸತೀಶನಿಂದ ಅನ್ಯಾಯಕ್ಕೆ ಒಳಗಾದ ಹತ್ತಾರು ಜನ ಇದರ ವಿರುದ್ಧ ಧ್ವನಿ ಎತ್ತಿದ್ದರು. ಇದೀಗ ಎನ್ ಆರ್ ಪುರ ಪೊಲೀಸ್ ಠಾಣೆಯಲ್ಲಿ ಜಾಮೀನು ರಹಿತ FIR ದಾಖಲಾಗಿದೆ.
ವಶೀಕರಣ ಮಾಟ ಮಂತ್ರದ ವಿರುದ್ಧ ಜನರು ಜಾಗೃತರಾಗಬೇಕು: ದೈವಾರಾಧಕ ತಮ್ಮಣ್ಣ ಶೆಟ್ಟಿ
ಮಲೆನಾಡಿನ ಭಾಗಗಳಾದ ಕೊಪ್ಪ, ಎನ್ ಆರ್ ಪುರ, ಮೂಡಿಗೆರೆ, ಬಾಳೆಹೊನ್ನೂರು, ತೀರ್ಥಹಳ್ಳಿ, ಶೃಂಗೇರಿ ಸೇರಿದಂತೆ ಅನೇಕ ಕಡೆಗಳಲ್ಲಿ ಮಾಟ ಮಂತ್ರ, ವಶೀಕರಣದ ಹೆಸರಲ್ಲಿ ಅಮಾಯಕ ಬಡವರಿಂದ ಲಕ್ಷಾಂತರ ಹಣ ಕೀಳುವ ದಂಧೆ ನಡೆಯುತ್ತಿದೆ. ಮತ್ತು ಇವರು ಮಾಡುವ ಆಚರಣೆಗಳು ನಮ್ಮ ದೈವಾರಾಧನೆಗೆ ಸಂಪೂರ್ವ ತದ್ವಿರುದ್ಧವಾಗಿದೆ. ಈ ಕುರಿತು ಜನರು ಜಾಗೃತಿಯಿಂದ ಇರಬೇಕು. ಈ ರೀತಿ ಹೆದರಿಸಲು ಬಂದಲ್ಲಿ ಅವರ ವಿರುದ್ಧ ಧ್ವನಿ ಎತ್ತಿ ಪ್ರಕರಣ ದಾಖಲಿಸಬೇಕು. ಸತೀಶ್ ಪಾತ್ರಿ ವಿರುದ್ಧ FIR ದಾಖಲಾಗಿರುವುದು ಈ ರೀತಿ ವಂಚನೆ ಮಾಡುತ್ತಿರುವವರಿಗೆ ಪಾಠವಾಗಬೇಕು. ಇನ್ನು ಮುಂದೆಯೂ ಇದರ ವಿರುದ್ಧ ನಿರಂತರವಾಗಿ ಅಭಿಯಾನ ನಡೆಸಲಾಗುತ್ತದೆ. ಇದರ ಕುರಿತಂತೆ ಮೊದಲು ವರದಿ ಮಾಡಿದ ನ್ಯೂಸ್ ಮಲ್ನಾಡ್ ಚಾನಲ್ ಗೂ ಈ ಮೂಲಕ ಶ್ಲಾಘನೆ ಸಲ್ಲಿಸುತ್ತೇನೆ ಎಂದು ದೈವಾರಾಧಕ ತಮ್ಮಣ್ಣ ಶೆಟ್ಟಿ ತಿಳಿಸಿದ್ದಾರೆ.













