ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಇತ್ತೀಚೆಗೆ ಉರುಳಿಗೆ ಸಿಲುಕಿದ್ದ ಹುಲಿ ಪ್ರಕರಣದ ಬೆನ್ನಲ್ಲೇ ಇದೀಗ ಮತ್ತೆರಡು ಹುಲಿಗಳ ಉಪಸ್ಥಿತಿ ಬೆಳಕಿಗೆ ಬಂದಿದ್ದು, ಸ್ಥಳೀಯರಲ್ಲಿ ಆತಂಕ ಮತ್ತಷ್ಟು ಹೆಚ್ಚಾಗಿದೆ.
ಏಳುನೂರುಖಾನ್ ಎಸ್ಟೇಟ್ ಸಮೀಪ ಅರಣ್ಯ ಇಲಾಖೆ ನಿಗಾ ವಹಿಸಲು ಅಳವಡಿಸಿದ್ದ ಕ್ಯಾಮೆರಾಗಳಲ್ಲಿ ಎರಡು ಹುಲಿಗಳ ಚಲನವಲನಗಳು ಸ್ಪಷ್ಟವಾಗಿ ಸೆರೆಯಾಗಿವೆ. ಇದರಿಂದಾಗಿ ಈ ಪ್ರದೇಶದಲ್ಲಿ ಹುಲಿಗಳ ಸಂಖ್ಯೆ ಕುರಿತು ಹೊಸ ಆತಂಕಗಳು ಮೂಡಿವೆ.

ಕಳೆದ ಶುಕ್ರವಾರ ಸಚಿವ ಕೆ.ಜೆ. ಜಾರ್ಜ್ ಅವರ ತೋಟದ ಸಮೀಪ ಸೊಂಟಕ್ಕೆ ಉರುಳು ಸಿಲುಕಿಸಿಕೊಂಡ ಸ್ಥಿತಿಯಲ್ಲಿ ಓಡಾಡುತ್ತಿದ್ದ ಗಾಯಗೊಂಡ ಹುಲಿ ಇನ್ನೂ ಅರಣ್ಯ ಇಲಾಖೆ ಸಿಬ್ಬಂದಿ ಕೈಗೆ ಸಿಕ್ಕಿಲ್ಲ. ಅಲ್ಲದೆ, ಇತ್ತೀಚೆಗೆ ಕ್ಯಾಮೆರಾಗಳಲ್ಲಿ ಸೆರೆಸಿಕ್ಕಿರುವ ಎರಡು ಹುಲಿಗಳ ಪೈಕಿ ಯಾವುದೂ ಗಾಯಗೊಂಡ ಹುಲಿಯಲ್ಲ ಎಂಬುದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ.

ಈ ಹಿನ್ನೆಲೆಯಲ್ಲಿ ಮುಳ್ಳಯ್ಯನಗಿರಿ ತಪ್ಪಲಿನ ಪ್ರದೇಶದಲ್ಲಿ ಒಟ್ಟು ಮೂರು ಹುಲಿಗಳು ಮುಕ್ತವಾಗಿ ಸಂಚರಿಸುತ್ತಿರುವ ಸಾಧ್ಯತೆ ಇದೆ ಎಂಬ ಅನುಮಾನ ವ್ಯಕ್ತವಾಗಿದೆ. ಗಾಯಗೊಂಡ ಹುಲಿಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಈಗಾಗಲೇ ಬೋನ್‌ಗಳನ್ನು ಅಳವಡಿಸಿದ್ದು, ಹೆಚ್ಚುವರಿ ಕ್ಯಾಮೆರಾಗಳ ಮೂಲಕ ನಿಗಾವಹಿಸುತ್ತಿದೆ. ಆದಾಗ್ಯೂ, ಹೊಸದಾಗಿ ಎರಡು ಹುಲಿಗಳು ಪತ್ತೆಯಾಗಿರುವುದು ಇಲಾಖೆಗೆ ಮತ್ತೊಂದು ಸವಾಲಾಗಿ ಪರಿಣಮಿಸಿದೆ.
ಇದರ ನಡುವೆ ಸುತ್ತಮುತ್ತಲಿನ ಕಾಫಿ ತೋಟಗಳಲ್ಲಿ ಹುಲಿಗಳ ಚಲನವಲನ ಹೆಚ್ಚಿರುವುದರಿಂದ ಸ್ಥಳೀಯ ಕಾರ್ಮಿಕರು ಹಾಗೂ ಗ್ರಾಮಸ್ಥರು ಭಯಭೀತರಾಗಿದ್ದಾರೆ. ತೋಟಗಳಿಗೆ ಕೆಲಸಕ್ಕೆ ತೆರಳಲು ಹಿಂಜರಿಯುತ್ತಿರುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಹುಲಿಗಳ ಚಲನವಲನಗಳ ಮೇಲೆ ನಿರಂತರ ನಿಗಾ ವಹಿಸಿರುವ ಅರಣ್ಯ ಇಲಾಖೆ, ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಹಾಗೂ ಯಾವುದೇ ಮಾಹಿತಿ ದೊರೆತರೆ ತಕ್ಷಣ ಇಲಾಖೆಗೆ ತಿಳಿಸುವಂತೆ ಮನವಿ ಮಾಡಿದೆ.













