ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಕಾರ್ಮಿಕ ಮಿತ್ರ ಬಳಗ ಶೃಂಗೇರಿ ಇವರ ವತಿಯಿಂದ ನಿನ್ನೆ ಶೃಂಗೇರಿಯ ಕನ್ನಡ ಭವನದಲ್ಲಿ ಕಾರ್ಮಿಕ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ತಾಲ್ಲೂಕಿನಲ್ಲಿ ಸೇವೆ ಸಲ್ಲಿಸುತ್ತಿರುವ ಆಂಬುಲೆನ್ಸ್ ಚಾಲಕರು, ಸಮಾಜ ಸೇವಕರು ಹಾಗೂ ಕಟ್ಟಡ ನಿರ್ಮಾಣ ಕಾರ್ಮಿಕರನ್ನು ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳ ಆಪ್ತ ಸಹಾಯಕರಾದ ಶಂ.ನ ಕೃಷ್ಣಮೂರ್ತಿ ಅವರು ಕಟ್ಟಡ ನಿರ್ಮಾಣ ಕಾರ್ಮಿಕರು ಹಾಗೂ ಆಂಬುಲೆನ್ಸ್ ವಾಹನ ಚಾಲಕರಿಗೆ ಗೌರವ ಸಮರ್ಪಿಸಿದರು.

ತಾಲೂಕು ಕಸಾಪದ ಪ್ರಥಮ ಮಹಿಳಾ ಅಧ್ಯಕ್ಷರಾಗಿದ್ದ ಶೈಲಜಾ ರತ್ನಾಕರ ಹೆಗ್ಡೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಮಿಕ ಮಿತ್ರ ಬಳಗದ ಅಧ್ಯಕ್ಷರಾದ ಶ್ರೀಕಾಂತ್ ಎಸ್.ಕೆ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಇದೇ ವೇಳೆ ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಂ.ನ ಕೃಷ್ಣಮೂರ್ತಿ ಅವರು, “ಹಗಲು-ರಾತ್ರಿ ಎನ್ನದೆ ಮತ್ತೊಬ್ಬರ ಜೀವ ಉಳಿಸಲು ಶ್ರಮಿಸುವ ಆಂಬುಲೆನ್ಸ್ ಚಾಲಕರ ಸೇವೆ ಅತ್ಯಂತ ಶ್ರೇಷ್ಠವಾದದ್ದು. ಯಾವುದೇ ಸಮಯದಲ್ಲೂ ಜನರನ್ನು ಆಸ್ಪತ್ರೆಗೆ ತಲುಪಿಸಿ ಜೀವ ಉಳಿಸುವ ಕಾರ್ಯದಲ್ಲಿ ಅವರು ತೊಡಗಿಸಿಕೊಂಡಿರುತ್ತಾರೆ” ಎಂದು ಪ್ರಶಂಸಿಸಿದರು.
ಕಾರ್ಯಕ್ರಮದಲ್ಲಿ ಕಸಾಪ ತಾಲ್ಲೂಕು ಅಧ್ಯಕ್ಷ ಆಗುಂಬೆ ಗಣೇಶ್ ಹೆಗ್ಡೆ, ರಮೇಶ್ ಶೂನ್ಯ, ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರಂಜಿತ್, ರಕ್ತದಾನಿಗಳು ವಾಟ್ಸ್ಆಪ್ ಬಳಗದ ಪ್ರಮುಖ ಪ್ರಶಾಂತ್ ಆನೆಗುಂದ, ಸಹಾಯಕ ಪೊಲೀಸ್ ಉಪನಿರೀಕ್ಷಕ ಡಾ. ಮೋಹನ್ ರಾಜಣ್ಣ, ಅಭಿನವ ವಿದ್ಯಾತೀರ್ಥ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಮಕ್ಕಳ ತಜ್ಞ ಡಾ. ಲಕ್ಷ್ಮಿನಾರಾಯಣ, ಸುಮಂಗಲಾ ಆನಂದಸ್ವಾಮಿ, ಭಾಸ್ಕರ್ ಪೂಜಾರಿ, ರೋಟರಿ ಸಂಸ್ಥೆಯ ಅಧ್ಯಕ್ಷ ಅಂಬಲಮನೆ ಸುಬ್ರಹ್ಮಣ್ಯ, ಚೇತನ್ ಕೆ.ಎನ್., ರಾಜೇಶ್ ಶೆಟ್ಟಿ, ಜ್ಯೋತಿ ಮಂಜುನಾಥ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.












