ಜಯಪುರ: (ನ್ಯೂಸ್ ಮಲ್ನಾಡ್ ವರದಿ) ಹೇರೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಹಾಗೂ ಶಾಲಾಭಿವೃದ್ಧಿ ಸಮಿತಿಯ ನಡುವಿನ ಮುಸುಕಿನ ಗುದ್ದಾಟ ಬೀದಿಗೆ ಬಂದಿದೆ.
ಇದನ್ನೂ ಓದಿ: ಪಿಎಂ-ಕಿಸಾನ್ 21ನೇ ಕಂತು ಬಿಡುಗಡೆ ಮಾಡಿದ ಪ್ರಧಾನಿ ಮೋದಿ: 9 ಕೋಟಿ ರೈತರಿಗೆ ಒಟ್ಟು 18,000 ಕೋಟಿ ರೂ. ಹಣ ಸಂದಾಯ

ಶಿಕ್ಷಕ ರಾಜೇಶ್ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ, ಹಣಕಾಸು ಲೆಕ್ಕಪತ್ರ ಶಾಲಾಭಿವೃದ್ಧಿ ಸಮಿತಿಗೆ ನೀಡುತ್ತಿಲ್ಲ ಎನ್ನುವುದು ಸೇರಿದಂತೆ ಅನೇಕ ಆರೋಪಗಳನ್ನು ಶಾಲಾಭಿವೃದ್ಧಿ ಸಮಿತಿ ಮಾಡಿದ್ದೂ, ಈ ಬಗ್ಗೆ ಹೇರೂರು ಶಾಲೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಪೋಷಕರು, ಹಳೆ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಕೊಪ್ಪ ತಾಲ್ಲೂಕು ಬಿಇಓ ಸಮಾಲೋಚನಾ ಸಭೆ ನಡೆಸಿದರು.
ಹಿಂದಿನ ಮುಖ್ಯ ಶಿಕ್ಷಕ ರಾಜೇಶ್ ಸರಿಯಾಗಿ ಪಾಠ ಪ್ರವಚನದಲ್ಲಿ ತೊಡಗುತ್ತಿಲ್ಲ, ಶಾಲಾಭಿವೃದ್ಧಿ ಸಮಿತಿಯ ಗಮನಕ್ಕೆ ತರದೇ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಣೆ ಮಾಡುತ್ತಿದ್ದು, ಶಾಲೆಯ ಯಾವುದೇ ಲೆಕ್ಕಪತ್ರವನ್ನು ನಮಗೆ ತೋರಿಸಿಲ್ಲ. ಶಾಲೆಯ ಶಿಕ್ಷಣ ವ್ಯವಸ್ಥೆ ಹದಗೆಟ್ಟಿದ್ದು, ಶಿಕ್ಷಕರ ನಡುವೆ ಗುಂಪುಗಾರಿಕೆಯ ಕಾರಣ ಮಕ್ಕಳಿಗೆ ಸರಿಯಾದ ಶಿಕ್ಷಣ ಸಿಗುತ್ತಿಲ್ಲ. ಇದರ ಪರಿಣಾಮ ಶಾಲೆಯ 7ನೆ ತರಗತಿಯ ಮಕ್ಕಳಿಗೆ ಹಿಂದಿ, ಇಂಗ್ಲಿಷ್ ಅಲ್ಲದೆ ಕನ್ನಡವೂ ಸರಿಯಾಗಿ ಓದಲು ಬರೆಯಲು ಬರುತ್ತಿಲ್ಲ. ಈ ಬಗ್ಗೆ ಹಲವು ಸಭೆ ನಡೆಸಿದರು ಯಾವುದೇ ಬದಲಾವಣೆಯಾಗಿಲ್ಲ, ಕೂಡಲೇ ತಪ್ಪಿತಸ್ತ ಶಿಕ್ಷಕರ ಶಿಸ್ತು ಕ್ರಮ ಜರುಗಿಸಿ, ಶಾಲೆಯ ಆರ್ಥಿಕ ವ್ಯವಹಾರಗಳ ತನಿಖೆ ನಡೆಸಬೇಕು ಎಂದು ಸಮಿತಿ ಅಧ್ಯಕ್ಷ ಸುನಿಲ್ ದೂರಿದರು.
ಜಿ ಪಂ ಮಾಜಿ ಸದಸ್ಯ ಕುಕ್ಕುಡಿಗೆ ರವೀಂದ್ರ ಮಾತನಾಡಿ, ಸರ್ಕಾರ ಬಡ ರೈತ ಕಾರ್ಮಿಕರ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಬೇಕೆಂಬ ಆಶಯದಲ್ಲಿ ಲಕ್ಷಾಂತರ ಹಣ ವ್ಯಯ ಮಾಡಿ ಸರ್ಕಾರಿ ಶಾಲೆಯ ಶಿಕ್ಷಕರಿಗೆ ಸಂಬಳ ನೀಡುತ್ತಿದ್ದೂ, ಇಲ್ಲಿನ ಮಕ್ಕಳಿಗೆ ಕನಿಷ್ಠ ಕನ್ನಡವನ್ನು ಸರಿಯಾಗಿ ಓದಲು ಬರೆಯಲು ಕಲಿಸಿಲ್ಲ.
ಇದನ್ನೂ ಓದಿ: ಆಲದ ಮರದ ನೆರಳಿನಲ್ಲಿ ಶುರುವಾದ ಭಾರತೀಯ ಸ್ಟಾಕ್ ಮಾರ್ಕೆಟ್ – ಇಂದು 400 ಲಕ್ಷ ಕೋಟಿಯ ಮೌಲ್ಯ!
ಶಿಕ್ಷಕರು ಸರಿಯಾಗಿ ಕೆಲಸ ಮಾಡಲಾಗದಿದ್ದರೆ ನೀವೇ ವರ್ಗಾವಣೆ ಮಾಡಿಕೊಂಡು ತೆರಳಿ, ಇಲ್ಲಾ ನಾವೇ ನಿಮ್ಮನ್ನು ಒತ್ತಾಯ ಪೂರ್ವಕವಾಗಿ ಕಳಿಸಬೇಕಾಗುತ್ತದೆ, ನಿಮ್ಮ ಗುಂಪುಗಾರಿಕೆ, ಹಣದ ಆಸೆಗೆ ಬಡ ಮಕ್ಕಳ ಶಿಕ್ಷಣ ಹಾಳಾಗುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಇಲ್ಲಿ ಮುಖ್ಯ ಶಿಕ್ಷಕರ ಜೊತೆಗೆ ಶಿಕ್ಷಣ ಇಲಾಖೆಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಶಾಲೆಯ ಆರ್ಥಿಕ ವ್ಯವಹಾರದ ಪಾಸ್ ಬುಕ್ ಖರ್ಚು ವೆಚ್ಚವನ್ನು ಶಾಲಾಭಿವೃದ್ಧಿಸಮಿತಿಯ ಸದಸ್ಯರ ಗಮನಕ್ಕೆ ತರದೇ ಮುಖ್ಯ ಶಿಕ್ಷಕ ವ್ಯವಹಾರ ಮಾಡಿದ್ದಾರೆ, ಕಲಿಕೆಯ ಗುಣಮಟ್ಟವೂ ಸರಿಯಿಲ್ಲ ಇದನ್ನು ಪರಿಶೀಲನೆ ಮಾಡದೆ ಮೇಲಧಿಕಾರಿಗಳು ಕರ್ತವ್ಯ ಲೋಪ ಎಸಗಿದ್ದಾರೆ. ಕೂಡಲೇ ತಪ್ಪಿತಸ್ಥರ ಮೇಲೆ ಶಿಸ್ತು ಕ್ರಮ ವಾಗಬೇಕು ಮತ್ತು ಶಾಲೆಯ ಶಿಕ್ಷಣ ಸುಧಾರಣೆ ಯಾಗಬೇಕು ಇಲ್ಲದಿದ್ದರೆ ಪೋಷಕರು ಶಾಲೆ ಬಂದ್ ಮಾಡಿ ಪ್ರತಿಭಟನೆ ನಡೆಸಲಿದ್ದಾರೆ ಎಂದರು.
ಇಲ್ಲಿನ ಸಮಸ್ಯೆ ಬಗ್ಗೆ ಹಲವು ಬಾರಿ ಸರಿಪಡಿಸಿಕೊಂಡು ಹೋಗುವಂತೆ ಶಿಕ್ಷಕ ರಾಜೇಶ್ ಗೆ ತಿಳಿಸಿದ್ದು, ಈಗ ಇನ್ನೊಬ್ಬ ಶಿಕ್ಷಕಿಗೆ ಮುಖ್ಯ ಶಿಕ್ಷಕರ ಜವಾಬ್ದಾರಿಯನ್ನು ನೀಡಲಾಗಿದೆ. ಶಾಲಾಭಿವೃದ್ಧಿ ಸಮಿತಿಯ ದೂರಿನಂತೆ ಹೇರೂರು ಶಾಲೆಯ ಆರ್ಥಿಕ ವ್ಯವಹಾರದ ಬಗ್ಗೆ ಸೂಕ್ತ ತನಿಖೆ ನಡೆಸುತ್ತೇವೆ ಮತ್ತು ವಿದ್ಯಾರ್ಥಿಗಳ ಕಲಿಕಾ ಮಟ್ಟ ಸುಧಾರಿಸಲು ಎಲ್ಲಾ ರೀತಿಯ ಕ್ರಮ ವಹಿಸಲಾಗುತ್ತದೆ ಎಂದು ಬಿಇ ಓ ರಾಘವೇಂದ್ರ ಹೇಳಿದರು.












