ಶೃಂಗೇರಿ ತಾಲೂಕಿನ ಹೊನ್ನವಳ್ಳಿಯ ಶ್ರೀ ವೆಂಕಟೇಶ್ವರ ಯಕ್ಷಗಾನ ಕಲಾಸಂಘವು ಕಳೆದ ಐವತ್ತು ವರ್ಷಗಳಿಂದ ನಿರಂತರವಾಗಿ ಕಲಾಸೇವೆಯಲ್ಲಿ ತೊಡಗಿಸಿಕೊಂಡಿರುವ ಹಿನ್ನೆಲೆ ಸುವರ್ಣ ಸಂಭ್ರಮಾಚರಣೆಯನ್ನು ಹಮ್ಮಿಕೊಂಡಿದೆ. ಮಲೆನಾಡಿನ ಯಕ್ಷಗಾನ ಪರಂಪರೆಯನ್ನು ಜೀವಂತವಾಗಿಟ್ಟಿರುವ ಈ ಸಂಸ್ಥೆಯ ಸುವರ್ಣ ಮಹೋತ್ಸವವು ಕಲಾಭಿಮಾನಿಗಳಲ್ಲಿ ವಿಶೇಷ ಉತ್ಸಾಹ ಮೂಡಿಸಿದೆ.
ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ; ಬೆಂಬಲ ಬೆಲೆ ಯೋಜನೆಯಡಿಯಲ್ಲಿ ವಿವಿಧ ಬೆಳೆಗಳ ಖರೀದಿ ಅವಧಿ ವಿಸ್ತರಣೆ

ಈ ಸುವರ್ಣ ಸಂಭ್ರಮಾಚರಣೆ ಗುರುವಾರ, 2026ರ ಜನವರಿ 29ರಂದು ನಡೆಯಲಿದ್ದು, ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ಶೃಂಗೇರಿಯ ಜಿ.ಎಸ್.ಬಿ ಸಭಾಭವನದಲ್ಲಿ ಬೆಳಿಗ್ಗೆ 10.30ಕ್ಕೆ ನಡೆಯಲಿದೆ. ವಿವಿಧ ಗಣ್ಯರು, ಕಲಾಪೋಷಕರು ಹಾಗೂ ಯಕ್ಷಗಾನ ಕ್ಷೇತ್ರದ ಗಣ್ಯರು ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಅದೇ ದಿನ ರಾತ್ರಿ 9.30ಕ್ಕೆ ಹೊಂಬಾಗಿಯ ಶ್ರೀ ಬ್ರಹ್ಮಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಸಾಂಪ್ರದಾಯಿಕ ಸನ್ಯಾನ ಹಾಗೂ ಖ್ಯಾತ ಕಲಾವಿದರ ಸಮಾಗಮದೊಂದಿಗೆ ಯಕ್ಷಗಾನ ಬಯಲಾಟ ನಡೆಯಲಿದೆ. ಪ್ರಸಿದ್ಧ ಅಭ್ಯಾಗತ ಕಲಾವಿದರ ಪ್ರದರ್ಶನಗಳು ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಲಿವೆ.
ಸುವರ್ಣ ಸಂಭ್ರಮಾಚರಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಕಲಾಭಿಮಾನಿಗಳು, ಪ್ರೇಕ್ಷಕರು ಮತ್ತು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.













