ಶೃಂಗೇರಿ ವಿಧಾನಸಭಾ ಕ್ಷೇತ್ರದ ರೈತರು ಎದುರಿಸುತ್ತಿರುವ ಗಂಭೀರ ಸಮಸ್ಯೆಗಳಿಗೆ ಶಾಶ್ವತ ಹಾಗೂ ನೀತಿಪರ ಪರಿಹಾರ ರೂಪಿಸುವ ಉದ್ದೇಶದಿಂದ ಅಮ್ಮ ಫೌಂಡೇಶನ್ ವತಿಯಿಂದ ರೈತ ಮುಖಂಡರೊಂದಿಗೆ ವಿಚಾರ ಸಂಕೀರ್ಣವನ್ನು 23-01-2026 (ಶುಕ್ರವಾರ) ಮಧ್ಯಾಹ್ನ 3.00 ಗಂಟೆಗೆ ಕೊಪ್ಪ ಪಟ್ಟಣದ ಯಡಗೆರೆ ಸಭಾಭವನ (ಮುಖ್ಯ ರಸ್ತೆ) ನಲ್ಲಿ ಆಯೋಜಿಸಲಾಗಿದೆ. ಇದು ಮೊದಲನೆಯ ವಿಚಾರ ಸಂಕೀರ್ಣವಾಗಿದ್ದು, ಮುಂದಿನ ಹಂತಗಳಲ್ಲಿ ರೈತ ಸಮಸ್ಯೆಗಳ ಕುರಿತು ನಿರಂತರವಾಗಿ ನಡೆಯಲಿರುವ ಸರಣಿ ವಿಚಾರ ಸಂಕೀರ್ಣಗಳು ಆರಂಭವಾಗಲಿದೆ ಎಂದು ಸುಧಾಕರ್ ಎಸ್. ಶೆಟ್ಟಿ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ; ಬೆಂಬಲ ಬೆಲೆ ಯೋಜನೆಯಡಿಯಲ್ಲಿ ವಿವಿಧ ಬೆಳೆಗಳ ಖರೀದಿ ಅವಧಿ ವಿಸ್ತರಣೆ

ಈ ವಿಚಾರ ಸಂಕೀರ್ಣದಲ್ಲಿ ರೈತ ಸಮಸ್ಯೆಗಳನ್ನು ಆಳವಾಗಿ ಅರಿತ 9 ತಜ್ಞರಾದ ಡಾ. ಕಲ್ಕುಳಿ ವಿಠ್ಠಲ್ ಹೆಗ್ಡೆ, ಪಿ.ಜೆ. ಆಂಟೋನಿ, ಗೋಪಾಲ್, ಪ್ರಕಾಶ ತಲವಾನೆ, ಯಡಗೆರೆ ಸುಬ್ಬಣ್ಣ, ಶೋಭಿತ್, ಅರವಿಂದ ಸಿಗದಾಳು, ಚಂದ್ರಶೇಖರ ಶೆಟ್ಟಿ ಕಡಬಗೆರೆ ಹಾಗೂ ರಂಜಿತ್ ಶೃಂಗೇರಿ ಇವರನ್ನು ಒಳಗೊಂಡ ರೈತ ಮುಖಂಡರು ನೆಲದ ವಾಸ್ತವ ಮತ್ತು ರೈತರ ಅನುಭವ ಆಧಾರಿತ ವಿಚಾರಧಾರೆಗಳನ್ನು ಮಂಡಿಸಲಿದ್ದಾರೆ.

ಈ ವಿಚಾರ ಸಂಕೀರ್ಣದ ತಜ್ಞರು, ಅಧ್ಯಕ್ಷರಾದ ಕಳಸಪ್ಪ ಗೌಡ್ರು ಹಾಗೂ ಸಂಚಾಲಕರಾದ ಮಹಾಕಾರ್ಯ ಸತೀಶ್ ಅವರು ಮುಂದಿನ ಎಲ್ಲಾ ವಿಚಾರ ಸಂಕೀರ್ಣಗಳಿಗೂ ಖಾಯಂ ಸದಸ್ಯರಾಗಿ ಹಾಗೂ ಅಮ್ಮ ರೈತ ವಿಚಾರ ಸಂಕೀರ್ಣದ ಪ್ರಬಂಧಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಕನಿಷ್ಠ ಐದು ಸರಣಿ ವಿಚಾರ ಸಂಕೀರ್ಣಗಳನ್ನು ಆಯೋಜಿಸಿ, ಪ್ರತಿಯೊಂದು ಸಂಕೀರ್ಣದಲ್ಲಿ ಮೂಡಿಬರುವ ವಾಸ್ತವಗಳು, ಸಲಹೆಗಳು ಹಾಗೂ ಪರಿಹಾರಗಳನ್ನು ಒಂದು ಸಮಗ್ರ ವರದಿಯಾಗಿ ಸಂಗ್ರಹಿಸುವುದು ಈ ಚಳವಳಿಯ ಮುಖ್ಯ ಗುರಿಯಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ; ಬೆಂಬಲ ಬೆಲೆ ಯೋಜನೆಯಡಿಯಲ್ಲಿ ವಿವಿಧ ಬೆಳೆಗಳ ಖರೀದಿ ಅವಧಿ ವಿಸ್ತರಣೆ
ಈ ವರದಿಯನ್ನು ಆಧಾರವಾಗಿ ಮಾಡಿಕೊಂಡು ರೈತ ನಾಯಕರಾದ ಕೇಂದ್ರ ಸಚಿವರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ಅರಣ್ಯ ಮತ್ತು ಕಂದಾಯ ಇಲಾಖೆ ಸಚಿವರನ್ನು ಭೇಟಿ ಮಾಡಿ ಶೃಂಗೇರಿ ಕ್ಷೇತ್ರದ ರೈತರ ಸಮಸ್ಯೆಗಳನ್ನು ನೇರವಾಗಿ ವಿವರಿಸಲಾಗುತ್ತದೆ. ಹಾಗೆಯೇ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು, ಕಂದಾಯ ಮತ್ತು ಅರಣ್ಯ ಇಲಾಖೆ ಸಚಿವರೊಂದಿಗೆ ಈ ವರದಿಯನ್ನು ಅಧಿಕೃತವಾಗಿ ಮಂಡಿಸಲಾಗುತ್ತದೆ.
ಈ ಸಂಪೂರ್ಣ ಪ್ರಕ್ರಿಯೆಯ ಮೂಲ ಉದ್ದೇಶ ಕೇವಲ ಚರ್ಚೆಗೆ ಸೀಮಿತವಾಗದೇ, ರೈತ ಪರ ನೀತಿ ನಿರ್ಣಯಗಳಿಗೆ ದಾರಿ ಮಾಡುವ ದಾಖಲೆ ರೂಪಿಸುವುದಾಗಿದೆ. ಇದರಿಂದ ಶೃಂಗೇರಿ ಕ್ಷೇತ್ರದ ರೈತರ ಬದುಕಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಇದು ಒಂದು ಮಹತ್ವದ ಹೆಜ್ಜೆಯಾಗಲಿದೆ ಎಂದು ಅಮ್ಮ ಫೌಂಡೇಶನ್ ಅಧ್ಯಕ್ಷ ಸುಧಾಕರ್ ಎಸ್. ಶೆಟ್ಟಿ ತಿಳಿಸಿದ್ದಾರೆ.













