
ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ತಾಲ್ಲೂಕಿನ ಗೋಣಿಬೀಡು ಹೋಬಳಿಯ ಚಿನ್ನಿಗ ಗ್ರಾಮದ ಯುವ ಕ್ರೀಡಾಪಟು ಚೇತನ್ ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕ ಗೆಲ್ಲುವ ಮೂಲಕ ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ.
ಚಿನ್ನಿಗ ಗ್ರಾಮದ ಗೀತಾ ಮತ್ತು ಉದಯ ದಂಪತಿಯ ಪುತ್ರ ಚೇತನ್, ಇತ್ತೀಚೆಗೆ ಮಧ್ಯಪ್ರದೇಶದಲ್ಲಿ ವಿದ್ಯಾಭಾರತಿ ಸಂಸ್ಥೆ ಹಾಗೂ ಶಾಲಾ ಕ್ರೀಡಾ ಒಕ್ಕೂಟದ (ಎಸ್‌ಜಿಎಫ್‌ಐ) ವತಿಯಿಂದ ಆಯೋಜಿಸಲಾಗಿದ್ದ ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಈ ಸಾಧನೆ ಮಾಡಿದ್ದಾರೆ.

ಪ್ರಸ್ತುತ ಮಂಗಳೂರಿನ ಕೈರಂಗಳದ ಪುಣ್ಯಕೋಟಿ ನಗರದ ಶಾರದಾ ಗಣಪತಿ ವಿದ್ಯಾಕೇಂದ್ರದಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ಚೇತನ್, ಕ್ರೀಡಾ ಕ್ಷೇತ್ರದಲ್ಲಿ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ.
ಗ್ರಾಮೀಣ ಪ್ರದೇಶದಿಂದ ರಾಷ್ಟ್ರಮಟ್ಟಕ್ಕೆ ಏರಿ ಚಿನ್ನದ ಪದಕ ಗೆದ್ದಿರುವ ಚೇತನ್ ಅವರ ಸಾಧನೆಗೆ ಶಾಲೆಯ ಆಡಳಿತ ಮಂಡಳಿ, ಶಿಕ್ಷಕರು, ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.
ಚೇತನ್ ಅವರ ಈ ಸಾಧನೆಯು ಗ್ರಾಮೀಣ ಭಾಗದ ಯುವ ಕ್ರೀಡಾಪಟುಗಳಿಗೆ ಹೊಸ ಸ್ಫೂರ್ತಿಯಾಗಿದ್ದು, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ. (ವರದಿ- ತನು ಕೊಟ್ಟಿಗೆಹಾರ)












