ಕೊಪ್ಪ: 20 ಶಾಲೆಗಳ ಮಕ್ಕಳಿಗೆ ಉಚಿತ ನೋಟ್‌ಬುಕ್ ವಿತರಣೆ

ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕರಿಮನೆ ಶಾಲೆಯಲ್ಲಿ ಡಚ್ ವಿವ್ಯೂ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್, ಬೆಂಗಳೂರು ಹಾಗೂ ನಗು ಫೌಂಡೇಶನ್, ಬೆಂಗಳೂರು ಸಹಯೋಗದಲ್ಲಿ 20 ಶಾಲೆಗಳ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಬುಕ್ ವಿತರಣೆ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷ ಶ್ರೀನಿವಾಸ್ ವಹಿಸಿದ್ದರು. ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ಜಯಣ್ಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ನಗು ಫೌಂಡೇಶನ್ ಕೈಗೊಂಡಿರುವ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿದರು.

ಕ್ಷೇತ್ರ ಸಮನ್ವಯಾಧಿಕಾರಿ ಯಶೋಧಾ ಮಾತನಾಡಿ, “ವಿದೇಶದಲ್ಲಿದ್ದರೂ ದೀಪ್ತಿ ಅವರು ಭಾರತದ ಮಕ್ಕಳ ಶಿಕ್ಷಣಕ್ಕಾಗಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಅವರ ಸಾಮಾಜಿಕ ಕಾಳಜಿ ಎಲ್ಲರಿಗೂ ಮಾದರಿಯಾಗಿದೆ” ಎಂದು ಹೇಳಿದರು.

ಶಿಕ್ಷಕರ ಸಂಘದ ಅಧ್ಯಕ್ಷ ಆದರ್ಶ ಅವರು ಫೌಂಡೇಶನ್‌ನ ಕಾರ್ಯಚಟುವಟಿಕೆಗಳು ಹಾಗೂ ಸಮಾಜದ ಅಭಿವೃದ್ಧಿಯಲ್ಲಿ ಪ್ರತಿಯೊಬ್ಬರ ಪಾತ್ರದ ಕುರಿತು ವಿವರಿಸಿದರು. ಜಿಲ್ಲಾ ಉಪಾಧ್ಯಕ್ಷ ಷಣ್ಮುಖರಾಜನ್ ಮಾತನಾಡಿ, “ಹಿಂದೆ ನಮ್ಮ ಶಿಕ್ಷಣದ ದಿನಗಳಲ್ಲಿ ಇಂತಹ ದಾನಿಗಳ ನೆರವು ಸಿಗುತ್ತಿರಲಿಲ್ಲ. ಇಂದು ವಿದ್ಯಾರ್ಥಿಗಳಿಗೆ ಅನೇಕ ಸೌಲಭ್ಯಗಳು ಲಭ್ಯವಿದ್ದು, ಅವುಗಳ ಸದ್ಬಳಕೆ ಅತ್ಯಂತ ಮುಖ್ಯ” ಎಂದು ತಿಳಿಸಿದರು.

ಕಾರ್ಯಕ್ರಮದ ವ್ಯವಸ್ಥಾಪಕರಾದ ಸಿ.ಆರ್. ಸುರೇಶ್ ಅವರು ನಗು ಫೌಂಡೇಶನ್ ಇದುವರೆಗೆ ಕೈಗೊಂಡಿರುವ ವಿವಿಧ ಸಾಮಾಜಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳ ಕುರಿತು ಸಮಗ್ರ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಸನ್ಮಾನಿಸಿ, ಕರಿಮನೆ ಶಾಲೆಯ ವಿದ್ಯಾರ್ಥಿಗಳು ಹಾಗೂ 20 ಶಾಲೆಗಳ ಮುಖ್ಯ ಶಿಕ್ಷಕರಿಗೆ ನೋಟ್‌ಬುಕ್‌ಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಎಂ.ಬಿ. ಅಭಿಷೇಕ್, ಸಿಆರ್‌ಪಿಗಳಾದ ಜ್ಯೋತಿ ಮತ್ತು ರುದ್ರಸ್ವಾಮಿ, ಎಸ್‌ಡಿಎಂಸಿ ಸದಸ್ಯರಾದ ಜಯಸುಧಾ ಹಾಗೂ ಸುಂದರ್, ಶಿಕ್ಷಕರು, ವಿದ್ಯಾರ್ಥಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ನಂಜುಂಡಸ್ವಾಮಿ ಕಾರ್ಯಕ್ರಮ ನಿರೂಪಿಸಿದರೆ, ಅಭಿಷೇಕ್ ಸ್ವಾಗತಿಸಿದರು. ವಿದ್ಯಾರ್ಥಿಗಳು ಪ್ರಾರ್ಥನೆ ಸಲ್ಲಿಸಿದ್ದು, ರಾಜನಾಯ್ಕ ವಂದಿಸಿದರು. (ವರದಿ- ಶಶಿ ಬೆತ್ತದಕೊಳಲು)

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.